ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿ ಹಂಚಿಕೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು, ಭೂಮಿ ಹಕ್ಕಿನಿಂದ ವಂಚಿತವಾಗಿರುವ ರೈತರಿಗೆ ನ್ಯಾಯ ಸಿಗಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸಾಗರದಲ್ಲಿ ನಡೆಯುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ತರ ಪಕ್ಷಾತೀತ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಸಾಗರ ಎಸಿ ಕಛೇರಿ ಆವರಣದಲ್ಲಿ ನಡೆಯುತ್ತಿರುವ ಶರಾವತಿ ಮುಳುಗಡೆ ರೈತರ ಪ್ರತಿಭಟನೆ ಇಂದಿಗೆ ಮೂರು ದಿನ ಪೂರೈಸಿದ್ದು, ನಾಳೆಯಿಂದ ಹೋರಾಟ ಮತ್ತೊಂದು ಸ್ವರೂಪ ಪಡೆಯಲಿದೆ.
ರೈತರ ಹೋರಾಟ ಆರಂಭವಾಗಿ ಮೂರು ದಿನ ಕಳೆದರೂ, ರಾಜ್ಯ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಅ.24 ರ ಬೆಳಿಗ್ಗೆ 11 ಗಂಟೆಯಿಂದ ಲಿಂಗನಮಕ್ಕಿ ಚಲೋ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.
ಸಾಗರದ ಎಸಿ ಕಛೇರಿ ಎದುರು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ ಶ್ರೀನಿವಾಸ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಲೆನಾಡಿನ ರೈತರ ಸಮಸ್ಯೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಅರಣ್ಯ ಇಲಾಖೆ ನೋಟೀಸ್ ನೀಡುತ್ತಿದೆ. 64 ವರ್ಷಗಳು ಕಳೆದರೂ ನ್ಯಾಯ ಒದಗಿಸದೇ ಸರ್ಕಾರಗಳು ಕಾಲಹರಣ ನಡೆಸುತ್ತಿದ್ದಾರೆ.ಹಾಗಾಗಿ ನಮ್ಮ ಜಾಗ ನಮಗೆ ಕೊಡಿ ಎಂದು ಆಗ್ರಹಿಸಿ ಲಿಂಗನಮಕ್ಕಿ ಚಲೋ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮೂರನೇ ದಿನಕ್ಕೆ ಕಾಲಿಟ್ಟ ಆಹೋರಾತ್ರಿ ಧರಣಿ
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾಗರ ಎಸಿ ಕಛೇರಿ ಆವರಣದಲ್ಲಿ ನಡೆಯತ್ತಿರುವ ಶರಾವತಿ ಮುಳುಗಡೆ ರೈತರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ರೈತ ಹೋರಾಟದ ನೆಲದಲ್ಲೇ ಮುಳುಗಡೆ ರೈತರ ಹೋರಾಟದ ಕಿಚ್ಚು ದಿನ ಕಳೆದಂತೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸಾವಿರಾರು ರೈತರು ಹೋರಾಟದಲ್ಲಿ ಭಾಗಿಯಾಗುವ ಮೂಲಕ ಸರ್ಕಾರದ ವಿರುದ್ದ ಒತ್ತಡದ ಜೊತೆಗೆ ಆಕ್ರೋಶ ಕೂಡ ಹೊರಹಾಕುತ್ತಿದ್ದಾರೆ. ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಭೂಮಿ ಹಕ್ಕನ್ನು ನೀಡಬೇಕು.ಅರಣ್ಯ ಇಲಾಖೆ ನೋಟೀಸ್ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ರೈತರ ಪ್ರತಿಭಟನೆ ಹಿನ್ನೆಲೆ ಎಸಿ ಕಛೇರಿ ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸೂಕ್ತ ಉತ್ತರ ಬರದಿದ್ದರಿಂದ ಲಿಂಗನಮಕ್ಕಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸಾವಿರಾರು ರೈತರು ಭಾಗಿಯಾಗಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ದಿನೇಶ್ ಶಿರಿವಾಳ, ಶ್ರೀಕರ್, ಶಿವಾನಂದ ಕುಗ್ವೆ ಸೇರಿದಂತೆ ಪ್ರಮುಖರಿದ್ದರು