ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕುಂಸಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ, ಪೊಲೀಸ್ ಅಧಿಕಾರಿ- ಸಿಬ್ಬಂದಿಗೆ ಇಂದು ಶಾಕ್ ನೀಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ಪೊಲೀಸ್ ಸಮುದಾಯ ಭವನ ಉದ್ಘಾಟನೆ ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಹೋಮ್ ಮಿನಿಸ್ಟರ್, ಸೊರಬಕ್ಕೆ ತೆರಳುವ ಮಾರ್ಗ ಮಧ್ಯೆ ಕುಂಸಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ, ಕರ್ತವ್ಯ ನಿರ್ವಹಣೆ ಸಂಬಂಧ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹಳೇ ವಾಹನ ಇಟ್ಕೊಂಡು ಪೂಜೆ ಮಾಡೋಕ್ಕಾಗುತ್ತಾ…?
ಕುಂಸಿ ಠಾಣೆಗೆ ದಿಢೀರ್ ಭೇಟಿ ನೀಡಿದ ಗೃಹ ಸಚಿವ ಪರಮೇಶ್ವರ್, ಆರಂಭದಲ್ಲೇ ಠಾಣೆಯ ಸುತ್ತಲೂ ವೀಕ್ಷಿಸಿದ್ರು.., ಈ ವೇಳೆ ಠಾಣೆಯ ಹಿಂಬದಿ ಹಾಗೂ ಇಕ್ಕೆಲಗಳಲ್ಲಿ ಇದ್ದ ಬೈಕ್, ಕಾರು ಹಾಗೂ ಹಳೆಯ ವಾಹನಗಳ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಕೇಳಿದ್ರು. 10-15 ವರ್ಷದ ಹಳೆಯ ವಾಹನಗಳಿವೆ. ಇಲ್ಲಿ ಜಾಗ ಇದೆ ಇಟ್ಟುಕೊಂಡಿದ್ದೀರಿ.., ನಗರದೊಳಗಿನ ಠಾಣೆಗಳಲ್ಲಿ ಜಾಗ ಎಲ್ಲಿರುತ್ತೇ..? ಇವನ್ನೆಲ್ಲಾ ಎನ್ ಮಾಡ್ಬೇಕು..? ವಾರಸುದಾರರಿಗೆ ಕೊಡಿ, ಯಾರು ಬಾರದಿದ್ದರೇ, ಕಾನೂನು ಪ್ರಕಾರ ಕ್ರಮ ಕೈಗೊಂಡು, ವಿಲೇವಾರಿ ಮಾಡಿ ಎಂದು ಕುಂಸಿ ಇನ್ಸ್ಪೆಕ್ಟರ್ ದೀಪಕ್ ಗೆ ಸೂಚನೆ ನೀಡಿದ್ರು.
ಪೊಲೀಸ್ ಠಾಣೆಯಲ್ಲಿ ಹೋಮ್ ಮಿನಿಸ್ಟರ್ ಶೋಧ:
ಕುಂಸಿ ಪೊಲೀಸ್ ಠಾಣೆಯ ಹೊರಭಾಗದಲ್ಲಿ ಮಾತ್ರವಲ್ಲದೇ, ಒಳಭಾಗದಲ್ಲಿ ಕೂಡ ಗೃಹ ಸಚಿವ ಪರಮೇಶ್ವರ್ ಸಂಪೂರ್ಣ ಶೋಧ ಕಾರ್ಯ ನಡೆಸಿದ್ರು.,
ಪೊಲೀಸ್ ಠಾಣೆಯ ಒಳಾಂಗಣದ ಜೊತೆಗೆ ಪ್ರತಿ ಕೊಠಡಿ, ಮೂಲ ಸೌಕರ್ಯ, ಸೆಲ್ ಗಳನ್ನು ಪರಿಶೀಲಿಸಿದ್ರು. ಇಷ್ಟಕ್ಕೆ ಸುಮ್ಮನಾಗದ ಹೋಮ್ ಮಿನಿಸ್ಟರ್, ಅಧಿಕಾರಿ- ಸಿಬ್ಬಂದಿಗಳ ಹಾಜರಾತಿ, ಸಿಬ್ಬಂದಿಯ ಮಾಹಿತಿ, ಅಪರಾಧ ಮತ್ತು ಠಾಣೆಯ ನಿರ್ವಹಣೆ ಸಂಬಂಧದ ಕಡತಗಳನ್ನು ಪರಿಶೀಲಿಸಿ, ಕೆಲ ಕಡತಗಳ ನಿರ್ವಹಣೆ ಸರಿಯಾಗಿಲ್ಲ ಎಂದು ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ.
ಸೀಜ್ ಆಗಿರುವ ವಾಹನಗಳ ದಾಖಲೆಯನ್ನು ಸರಿಯಾಗಿ ನಿರ್ವಹಿಸಿಲ್ಲ. ಮುಖ್ಯವಾಗಿ ಎರಡು ತಿಂಗಳಾದ್ರೂ ಠಾಣೆಯಲ್ಲಿರುವ ಕ್ರೈಮ್ ಟೇಬಲ್ ಅಪ್‌ಡೇಟ್ ಮಾಡಿಲ್ಲ ಎಂದು ಅಧಿಕಾರಿ- ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡ ಹೋಮ್ ಮಿನಿಸ್ಟರ್ ಪರಮೇಶ್ವರ್, ಕೆಲ ಸಲಹೆ ಸೂಚನೆಗಳನ್ನು ಸಹ ನೀಡಿದ್ರು.
ಈ ವೇಳೆ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಮಂಜುನಾಥ್ ಭಂಡಾರಿ, ಬಲ್ಕಿಶ್ ಭಾನು, ಪೂರ್ವ ವಲಯ ಐಜಿಪಿ ರಮೇಶ್ ಬಾನೋತ್, SP ಮಿಥುನ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ಉಪಸ್ಥಿತರಿದ್ದರು.