ಶಿವಮೊಗ್ಗ : ಕೋಮು ಸೂಕ್ಷ್ಮ ಜಿಲ್ಲೆಯಾದ ಶಿವಮೊಗ್ಗದಲ್ಲಿ ವಿವಿಧ ಆಚರಣೆಗಳ ಸಂದರ್ಭದಲ್ಲಿ ವಿವಾದಾತ್ಮಕ ಫ್ಲೆಕ್ಸ್, ಬ್ಯಾನರ್ ಹಾಕುತ್ತಿದ್ದಾರೆ. ಸಂಬಂಧಪಟ್ಟವರಿಗೆ ಎಚ್ಚರಿಸಿ ಕ್ರಮ ತೆಗೆದುಕೊಂಡ್ರೇ, ವಿವಾದಗಳು ಸೃಷ್ಟಿಯಾಗಲ್ಲ. ಈ ಬಗ್ಗೆ ನಿಗಾ ವಹಿಸಿ ಎಂದು ಗೃಹ ಸಚಿವ ಡಾ ಜಿ. ಪರಮೇಶ್ವರ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ಪೊಲೀಸ್ ಇಲಾಖೆ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಪೊಲೀಸ್ ಭವನವನ್ನು ಉದ್ಘಾಟಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಬಳಿಕ ಶಿವಮೊಗ್ಗ ಜಿಲ್ಲಾ ಪೊಲೀಸ್ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಮಾಜದ ಶಾಂತಿ ಕದಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸುವರ ಮೇಲೆ ನಿಗಾವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
“ಬಹುತೇಕ ಪ್ರಕರಣಗಳು ಬಂದಾಗ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಪೊಲೀಸರು ದೂರುಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿದಿನ ಸಾರ್ವಜನಿಕರು ನನ್ನ ಬಳಿಗೆ ದೂರು ತೆಗೆದುಕೊಂಡು ಬರುತ್ತಿದ್ದಾರೆ. ಇದು ಮುಂದುವರಿದರೆ ಸಹಿಸುವುದಿಲ್ಲ. ಪೊಲೀಸ್ ಠಾಣೆಗೆ ಬರುವ ಜನರ ಸಮಸ್ಯೆಗಳನ್ನು ಆಲಿಸಿ, ಜನಸ್ನೇಹಿಯಾಗಿ ಕೆಲಸ ಮಾಡಬೇಕು.
- ಡಾ ಜಿ.ಪರಮೇಶ್ವರ್ : ಗೃಹ ಸಚಿವರು.
ಪೊಲೀಸ್ ಸಮುದಾಯ ಭವನ ಉದ್ಘಾಟನೆ :
ಶಿವಮೊಗ್ಗದ ಡಿ.ಎ.ಆರ್. ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಸಮುದಾಯ ಭವನದ ಉದ್ಘಾಟನೆಯನ್ನು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ನೆರವೇರಿಸಿದ್ದಾರೆ.
ಡಿ.ಎ.ಆರ್ ಆವರಣದಲ್ಲಿ 3.75 ಕೋಟಿ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಪೊಲೀಸ್ ಸಮುದಾಯ ಭವನವನ್ನು ನಿರ್ಮಿಸಲಾಗಿದ್ದು, 500 ಸೀಟಿಂಗ್ ಸಾಮರ್ಥ್ಯ, ಊಟದ ಹಾಲ್ ಸೇರಿದಂತೆ ಸುಸಜ್ಜಿತವಾಗಿ ಭವನ ನಿರ್ಮಿಸಲಾಗಿದೆ.
ಡಿಎಆರ್ ಪೊಲೀಸ್ ಭವನದ ಉದ್ಘಾಟನೆ ವೇಳೆ ಶಾಸಕರಾದ ಎಸ್.ಎನ್ ಚನ್ನಬಸಪ್ಪ, ಬಿ.ಕೆ ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಂಜುನಾಥ ಭಂಡಾರಿ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.