ಶಿವಮೊಗ್ಗ: ಭದ್ರಾವತಿ ತಾಲೂಕಿನ 2 ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ ಗಾಂಜಾ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.
ಭದ್ರಾವತಿ ತಾಲೂಕಿನ ಅಗರದಹಳ್ಳಿ ಕ್ಯಾಂಪ್ ನ ಮನೆಯೊಂದರ ಮೇಲೆ ಹೊಳೆಹೊನ್ನೂರು ಠಾಣೆ ಪೊಲೀಸರು ದಾಳಿ ಮಾಡಿದ್ದು, ಬರೋಬ್ಬರಿ 2.80 ಲಕ್ಷ ರೂ. ಮೌಲ್ಯದ 5.5 ಕೆ.ಜಿ ಒಣ ಗಾಂಜಾ ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಅಗರದಳ್ಳಿ ಕ್ಯಾಂಪ್ ನ ಸಂಜೀವ್ ರಾಜು (40) ಮತ್ತು ಭದ್ರಾವತಿ ಸಿದ್ದರ ಕಾಲೋನಿಯ ಗುರುಪ್ರಸಾದ್ (24) ಬಂಧಿತ ಆರೋಪಿಗಳು.
ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಗಾಂಜಾ ಸಂಗ್ರಹಿಸಿಟ್ಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ಕೂಡ ದಾಖಲಿಸಿದ್ದಾರೆ.
ಸಿಗೇಬಾಗಿಯಲ್ಲಿ ಸಿಇಎನ್ ಕ್ರೈಂ ಪೊಲೀಸರ ದಾಳಿ :
ಇನ್ನು ಭದ್ರಾವತಿ ನಗರದ ಸಿಗೇಬಾಗಿ ಹಳೆ ಬಸ್ ನಿಲ್ದಾಣದ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಶಿವಮೊಗ್ಗದ ಸಿಇಎನ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ಸಿಗೇಬಾಗಿಯ ಮೊಹಮ್ಮದ್ ಅಬ್ಬಾಸ್ (27) ಬಂಧಿತ ಆರೋಪಿ. ಈತನಿಂದ 95 ಸಾವಿರ ರೂ. ಮೌಲ್ಯದ 1 ಕೆಜಿ 37 ಗ್ರಾಂ ಒಣ ಗಾಂಜಾ ಮತ್ತು 350 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಬಸ್ ನಿಲ್ದಾಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸೈಬರ್ ಕ್ರೈಂ ಪೊಲೀಸರು ದಾಳಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ.