ಶಿವಮೊಗ್ಗ : ದೆವ್ವ ಪ್ರತ್ಯಕ್ಷವಾಗಿ ಸಾಗರ ತಾಲೂಕಿನಲ್ಲಿ ಅಪಘಾತ ನಡೆದಿದ್ದು, ಇಬ್ಬರು ಸ್ಥಿತಿ ಗಂಭೀರವಾಗಿದೆ ಎಂಬ ಪೋಟೋ ಹಾಗೂ ವಿಡಿಯೋ ಶೇರ್ ಮಾಡುವವರಿಗೆ ಪೊಲೀಸ್ ಇಲಾಖೆ ಶಿವಮೊಗ್ಗದಲ್ಲಿ ವಾರ್ನಿಂಗ್ ನೀಡಿದೆ.
ಕಳೆದ ಕೆಲ ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಗರ ತಾಲೂಕಿಗೆ ಸಂಬಂಧಿಸಿದ್ದು ಎಂಬ ಈ ಪೋಸ್ಟ್ ನಿರಂತರವಾಗಿ ವೈರಲ್ ಆಗುತ್ತಿದ್ದು, ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಆ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿ ಪ್ರಕಟಣೆ ಹೊರಡಿಸಿದೆ.
ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು, ಫಾರ್ವರ್ಡ್ ಮಾಡುವುದು, ಶೇರ್ ಮಾಡುವುದು ಅಪರಾಧ. ಈ ರೀತಿ ಮಾಡುವುದು ಕಂಡುಬಂದಲ್ಲಿ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ಸಹ ನೀಡಿದೆ.
ಏನಿದು ದೆವ್ವದ ವಿಡಿಯೋ….?
ಸಾಗರ ತಾಲೂಕು ಕಾರ್ಗಲ್ ಸಮೀಪದ ಕಂಚಿಕೈ ರಸ್ತೆಯಲ್ಲಿ ಇಬ್ಬರು ಬೈಕ್ ಸವರಾರಿಗೆ ದೆವ್ವ ಎದುರಾಗಿದೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮತ್ತೊಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋ ಹಾಗೂ ಒಂದು ವಿಡಿಯೋವನ್ನು ನಿರಂತರವಾಗಿ ಶೇರ್ ಮಾಡಲಾಗುತ್ತಿದೆ. ಇದರಿಂದ ಈ ಭಾಗದ ಜನರಲ್ಲಿ ಆತಂಕ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರಕಟಣೆ ನೀಡಿರುವ ಶಿವಮೊಗ್ಗ ಪೊಲೀಸರು, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.