ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ರೈತರ ಜಮೀನು ಕಬಳಿಸುತ್ತಿರುವ ವಕ್ಫ್ ಮಂಡಳಿ ವಿರುದ್ಧ ರಾಷ್ಟ್ರಭಕ್ತರ ಬಳಗ ಆಕ್ರೋಶ ವ್ಯಕ್ತಪಡಿಸಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು, ವಕ್ಫ್ ಮಂಡಳಿ ಹಾಗೂ ರಾಜ್ಯ ಸರ್ಕಾರದ ನಡೆಯನ್ನ ಖಂಡಿಸಿದ್ದಾರೆ.
ಬಿಜಾಪುರ ಮತ್ತು ಕೊಪ್ಪಳ ಜಿಲ್ಲೆಯ ರೈತರ ಜಮೀನಿನ ಪಹಣಿಗಳಲ್ಲಿ ಏಕಾಏಕಿ ವಕ್ಫ್ ಆಸ್ತಿ ಎಂದು ನಮೂದಿಸಿ ರೈತರಿಗೆ ತೆರವಿಗೆ ನೋಟಿಸ್ ನೀಡಲಾಗುತ್ತಿದೆ. ರಾಜ್ಯದ ರೈತರ ಜಮೀನು ಮಾತ್ರವಲ್ಲದೇ ಹಿಂದೂ ಮಠಗಳ ಆಸ್ತಿಯನ್ನು ಕಬಳಿಸಲು ವಕ್ಫ್ ಹುನ್ನಾರ ನಡೆಸುತ್ತಿದೆ ಎಂದು ದೂರಿದ್ದಾರೆ.ವಕ್ಫ್ ಸಚಿವ ಜಮೀರ್ ಅಹ್ಮದ್ ವಿರುದ್ದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಅನ್ನದಾತನನ್ನು ನೆಮ್ಮದಿಯಿಂದ ಬದುಕಲು ಬಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿರೋದು ಜಮೀರ್ ಅಹಮದ್ ಸರ್ಕಾರ:
ರಾಜ್ಯದಲ್ಲಿರೋದು ಸಿದ್ದರಾಮಯ್ಯ ಸರ್ಕಾರ ಅಲ್ಲ, ಮುಸ್ಲಿಂ ಸರ್ಕಾರ, ಅದು ಜಮೀರ್ ಅಹಮದ್ ಸರ್ಕಾರ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಠ ಮಾನ್ಯಗಳ ಆಸ್ತಿ, ದೇವಸ್ಥಾನದ ಆಸ್ತಿಯಲ್ಲಿ ವಕ್ಫ್ ಅಂತಾ ಬರೆಸುತ್ತಾರಲ್ಲ ಎಷ್ಟು ಸೊಕ್ಕು ಇರಬೇಕು. ವಕ್ಪ್ ಅಧಿಕಾರಿಗಳಿಗೆ ಜಮೀರ್ ಅಹಮದ್ ನೇ ಸಿಎಂ ಆಗಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
” ರೈತರಿಗೆ ವಕ್ಫ್ ನೋಟಿಸ್ ವಿಚಾರವಾಗಿ ಯಾಕೇ ಯಾರು ಮಾತಾಡುತ್ತಿಲ್ಲ. ರಾಜ್ಯದಲ್ಲಿ ಯಾವ ಮಂತ್ರಿಗಳು ಬದುಕಿಲ್ವಾ…? ನಿಮಗೆ ರೈತರ ಶಾಪ ತಟ್ಟುತ್ತದೆ. ರೈತರ ಆಸ್ತಿ ಬಿಟ್ಟು ಹೋಗಬಾರದು ಎಂದರೇ, ಕಾಂಗ್ರೆಸ್ ಸೋಲಿಸಿ. ಹಿಂದೂಪರ ಇರುವ ವ್ಯಕ್ತಿಗಳಿಗೆ ಉಪಚುನಾವಣೆಯಲ್ಲಿ ಮತ ನೀಡಬೇಕು.”
-ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರು
ರಾಜ್ಯದಲ್ಲಿ ಸಾಂಕೇತಿಕವಾಗಿ ಹಿಂದುಪರ ವ್ಯಕ್ತಿಗಳು ಹೋರಾಟ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲದೇ ನೋಟೀಸ್ ಕೊಟ್ಟಿದ್ದಾರಾ..? ಜಮೀರ್ ಅಹಮದ್ ಅವನು ಪಾಕಿಸ್ತಾನದಲ್ಲಿ ಇದ್ದಾನೋ, ಹಿಂದುಸ್ತಾನದಲ್ಲಿ ಇದ್ದಾನೋ…? ಜಮೀರ್ ಅಹಮದ್ ಮಂತ್ರಿಯಾಗಲು ಅಯೋಗ್ಯ ಇದ್ದಾನೆ. ಮೊದಲು ಅವನನ್ನು ಕಿತ್ತು ಬಿಸಾಕಬೇಕು. ನಂತರ ರೈತರು, ಮಠ ಮಂದಿರ, ದೇವಸ್ಥಾನಗಳ ಆಸ್ತಿ ವಾಪಸ್ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.