ಶಿವಮೊಗ್ಗ : ಪಕ್ಕದ ಮನೆಯಲ್ಲಿ ಸಾವಿಗೀಡಾಗಿದ್ದ ವ್ಯಕ್ತಿಯ ಅಂತಿಮ ದರ್ಶನಕ್ಕೆ ಬಂದಿದ್ದ ಸಂಬಂಧಿಕರಿಗೆ ಟೀ ಮಾಡಿ ಕೊಟ್ಟಿದ್ದ ಕುಟುಂಬವೇ, ಇಂದು ತನ್ನ ಕರುಳ ಕುಡಿಯನ್ನೇ ಕಳೆದುಕೊಂಡಿದೆ.
ಇಂತಹ ದೌರ್ಭಾಗ್ಯಕ್ಕೆ ಗುರಿಯಾಗಿರುವುದು ಹಿರೀಮನೆ ಗ್ರಾಮದ ರಾಜೇಶ್ ಹಾಗೂ ಅಶ್ವಿನಿ ದಂಪತಿ.
ಕಳೆದ ಅಕ್ಟೋಬರ್ 24 ರಂದು ಮೈ ಮೇಲೆ ಟೀ ಚೆಲ್ಲಿಕೊಂಡು ಗಾಯಗೊಂಡಿದ್ದ ರಾಜೇಶ್ ದಂಪತಿಯ ಮಗು ಅಥರ್ವ(2) ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.
ಈ ಘಟನೆಯಿಂದ ಶಿವಮೊಗ್ಗದ ಹೊಸನಗರ ತಾಲೂಕಿನ ಹಿರೀಮನೆ ಗ್ರಾಮದ ನಿವಾಸಿಗಳಾದ ರಾಜೇಶ್ ಹಾಗೂ ಅಶ್ವಿನಿ ದಂಪತಿ ಕಣ್ಣೀರಲ್ಲೇ ಕೈ ತೊಳೆಯುವಂತಾಗಿದೆ.
ಕಳೆದ ಅ.24 ರಂದು ರಾಜೇಶ್ ಅವರ ನೆರೆಮನೆಯ ನಿವಾಸಿಯೊಬ್ಬರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಸಂಬಂಧಿಕರಿಗೆ ರಾಜೇಶ್ ಪತ್ನಿ ಅಶ್ವಿನಿ ಟೀ ಮಾಡಿ ಕೊಡುತ್ತಿದ್ದರು. ಈ ವೇಳೆ ಟೀ ಮಾಡಿಟ್ಟಿದ್ದ ಪಾತ್ರೆಯನ್ನು ಮಗು ಅಥರ್ವ ಮೈ ಮೇಲೆ ಬೀಳಿಸಿಕೊಂಡಿತ್ತು.
ಬಿಸಿ ಟೀ ಮೈ ಮೇಲೆ ಬಿದ್ದು, ಗಂಭೀರ ಗಾಯಗೊಂಡಿದ್ದ ಮಗುಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದೊಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಗು, ಫಲಕಾರಿಯಾಗದೇ ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ನೆರೆಮನೆಯ ನಿವಾಸಿಯ ಸಾವಿಗೆ ಮಿಡಿದಿದ್ದ ಆ ಮನೆಯಲ್ಲಿಯೇ ಇವತ್ತು ಸೂತಕದ ಛಾಯೆ ಆವರಿಸಿರುವುದು ನಿಜಕ್ಕೂ ಬೇಸರದ ಸಂಗತಿ.