Malenadu Mitra
ಶಿವಮೊಗ್ಗ ಸಾಗರ

ರೈತರ ಭೂ ಹಕ್ಕಿನ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್ : ಬೇಡಿಕೆ ಶೀಘ್ರದಲ್ಲೇ ಈಡೇರಿಸದಿದ್ದರೇ ಮತ್ತೆ ಶುರು.

ಸಾಗರ : ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿ ಹಂಚಿಕೆಗೆ ಟಾಸ್ಕ್ ಫೋರ್ಸ್ ರಚನೆ. ಸುಪ್ರೀ ಕೋರ್ಟ್ ಗೆ ವಕೀಲರ ನೇಮಕ, ಭೂಮಿ ಹಕ್ಕಿನಿಂದ ವಂಚಿತವಾದ ರೈತರಿಗೆ ನ್ಯಾಯ ಸಿಗಬೇಕು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸಾಗರದಲ್ಲಿ ನಡೆಯುತ್ತಿದ್ದ ರೈತರ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ.
ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ರೈತಪರ ಸಂಘಟನೆಗಳು ಹಾಗೂ ರೈತರು, ಸಾಗರ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಕಳೆದ 11 ದಿನದಿಂದ ಪ್ರತಿಭಟನೆ‌ ನಡೆಸುತ್ತಿದ್ದರು. ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ರೈತರ ಜೊತೆ ಮಾತುಕತೆ ನಡೆಸಿ, ಸಲಹೆ ನೀಡಿದ ಹಿನ್ನೆಲೆಯಲ್ಲಿ ಅವರ ಸಮ್ಮುಖದಲ್ಲಿ ರೈತ ಪ್ರಮುಖರು ತಮ್ಮ ಅಹೋರಾತ್ರಿ ಪ್ರತಿಭಟನೆಗೆ ಮಂಗಳ ಹಾಡಿದ್ದಾರೆ.
ಮಾಜಿ ಸಚಿವರೂ ಆದ ಕಾಗೋಡು ತಿಮ್ಮಪ್ಪ ಮಾತನಾಡಿ, ಸರಕಾರ ರೈತರ ಪ್ರತಿಭಟನೆಗೆ ಮಣಿದಿದ್ದು, ಶರಾವತಿ ಸಂತ್ರಸ್ತರು ಸೇರಿದಂತೆ ಜಿಲ್ಲೆಯಲ್ಲಿ ಜ್ವಲಂತವಾಗಿರುವ ಭೂಮಿ ಹಕ್ಕು ವಿವಾದದ ಪರಿಹಾರಕ್ಕೆ ಟಾಸ್ಕ್‌ಫೋರ್ಸ್ ರಚನೆ, ಸೇರಿದಂತೆ ಹಲವು ಸಮಸ್ಯೆಗಳಿಗೆ ಅಗತ್ಯವಿರುವ ಕಾನೂನು ಬದಲಾವಣೆಗೂ ಮುಂದಾಗಿದೆ. ಬಡ ರೈತರ ಜಮೀನು ಕಿತ್ತುಕೊಳ್ಳುವ ಅರಣ್ಯ ಇಲಾಖೆಯ ನೋಟೀಸ್‌ಗೂ ತಡೆ ಹಾಕುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕೂಡ ರೈತರ ಸಮಸ್ಯೆ ಪರಿಹಾರಕ್ಕೆ ಅಗತ್ಯ ನೆರವು ನೀಡುವ ಭರವಸೆ ಕೊಟ್ಟಿದ್ದಾರೆ. 11 ದಿನದಿಂದ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಮೊದಲ ಹಂತದ ಜಯ ದೊರೆತಿದೆ. ಒಂದು ವೇಳೆ ಸರಕಾರ ಹಾಗೂ ಅಧಿಕಾರಿಗಳು ನಮ್ಮ ಸಮಸ್ಯೆಗೆ ಮುಂದಿನ ದಿನದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಹೋರಾಟ ಮುಂದುವರಿಸೋಣ. ನಾನೂ ನಿಮ್ಮ ಜತೆ ಸೇರಿ ಹೋರಾಟಕ್ಕೆ ಧುಮುಕುತ್ತೇನೆ. ಈಗ ಧರಣಿ ಸತ್ಯಾಗ್ರಹಕ್ಕೆ ವಿರಾಮ ಹಾಕಿ ಎಂದು ಮನವಿ ಮಾಡಿದರು.

“ರೈತರ ಹೋರಾಟ ಮುಕ್ತಾಯವಾಗಿದೆ ಎಂದು ಸರ್ಕಾರ ಭಾವಿಸುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ನೊಟೀಸ್ ಕೊಡುವುದು, ಮತ್ತೆ ರೈತರ ಭೂಮಿ ಕಿತ್ತುಕೊಳ್ಳುವ ಪ್ರಕರಣ ನಡೆದರೆ, ತಕ್ಷಣವೇ ಇನ್ನೊಂದು ಸುತ್ತಿನ ಪ್ರತಿಭಟನೆಯನ್ನು ಪ್ರಾರಂಭಿಸುತ್ತೇವೆ.’

               -ತೀ.ನ. ಶ್ರೀನಿವಾಸ್, ರೈತ ಮುಖಂಡರು

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಸಭೆ ಯಶಸ್ವಿಯಾಗಿದೆ. ಸಚಿವ ಮಧು ಬಂಗಾರಪ್ಪ ಕೂಡ ಸಭೆಯಲ್ಲಿ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದ್ದರು. ಜತೆಯಲ್ಲಿ ಎಲ್ಲರೂ ಒಟ್ಟಾಗಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತೇವೆ. ನಿಮ್ಮ ಬೇಡಿಕೆ ಈಡೇರಿಸುವುದು ನಮ್ಮ ಜವಾಬ್ದಾರಿ ಎಂದಿದ್ದರು. ಮುಖ್ಯ ಕಾರ್ಯದರ್ಶಿಯವರು ಭರವಸೆ ನೀಡಿದ್ದಾರೆ. ನಮ್ಮೆಲ್ಲರ ಮಾರ್ಗದರ್ಶಕರು, ಈ ಹೋರಾಟಕ್ಕೆ ಚಾಲನೆ ನೀಡಿದ್ದ ಹಿರಿಯರಾದ ಕಾಗೋಡು ತಿಮ್ಮಪ್ಪನವರು ‘ಸರಕಾರದ ಮೇಲೆ ಹಾಗೂ ಸಚಿವರ ಮಾತಿಗೆ ಬೆಲೆ ಕೊಡೋಣ. ಅವರು ಈಗ ನೀಡಿರುವ ಭರವಸೆಯ ಈಡೇರಿಕೆಗೆ ಕಾಲಾವಕಾಶ ಕೊಡೋಣ. ಸದ್ಯ ಪ್ರತಿಭಟನೆ ಕೈಬಿಡುವಂತೆ ಕೇಳಿಕೊಂಡಿದ್ದಾರೆ’. ನಮ್ಮ ನಾಯಕರ ಮಾತಿಗೆ ಗೌರವಿಸಿ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ. ಜಿಲ್ಲೆಯ ಹತ್ತಾರು ಸಂಘ ಸಂಸ್ಥೆಗಳು, ಸಾವಿರಾರು ರೈತರು, ಸಂಸದರು, ಜನಪ್ರತಿನಿಧಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಮೇಶ್ ಕೆಳದಿ, ರಾಮಚಂದ್ರಪ್ಪ ಮನೆಘಟ್ಟ, ಹೇಮಂತ್, ಕೆ.ಎನ್. ವೆಂಕಟಗಿರಿ, ದೇವರಾಜು, ದಿನೇಶ್, ಶಿವು ಮೈಲಾರಿಕೊಪ್ಪ, ಚಂದ್ರಣ್ಣ ಮೊದಲಾದವರಿದ್ದರು.

Ad Widget

Related posts

ಹೆದ್ದಾರಿ ಯೋಜನೆಗಳಿಗೆ ಗುದ್ದಲಿಪೂಜೆ

Malenadu Mirror Desk

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿಂದ 3 ಹೊಸ ಶಾಖೆ ಆರಂಭ

Malenadu Mirror Desk

ಜನಪರ ಕೆಲಸ, ಜೀವಪರ ವ್ಯಕ್ತಿತ್ವ ನನ್ನನ್ನು ಗೆಲ್ಲಿಸಲಿದೆ
ಬಲಾಢ್ಯರ ಹಣಕ್ಕೆ ನನ್ನ ಒಳ್ಳೆತನವೇ ಸವಾಲು : ಶಾರದಾಪೂರ್ಯನಾಯ್ಕ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.