ಶಿವಮೊಗ್ಗ : ಕೂಲಿ ಕೆಲಸ ಮುಗಿಸಿಕೊಂಡು, ಮನೆಗೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ಭೀಕರವಾಗಿ ದಾಳಿ ಮಾಡಿದೆ.
ಭದ್ರಾವತಿ ತಾಲೂಕಿನ ಅಂತರಗಂಗೆ ಸಮೀಪದ ಬಿಸಿಲಮನೆ ಗ್ರಾಮದ ಬಳಿ ಸಂಜೆ ಘಟನೆ ನಡೆದಿದ್ದು, ಕರಡಿ ದಾಳಿಯಲ್ಲಿ ಕೆ.ಹೆಚ್.ನಗರದ ನಿವಾಸಿ ದೇವೇಂದ್ರಪ್ಪ(55) ಗಂಭೀರ ಗಾಯಗೊಂಡಿದ್ದಾರೆ.
ಕೂಲಿ ಕೆಲಸ ಮುಗಿಸಿ, ಮನೆಗೆ ತೆರಳುತ್ತಿದ್ದ ದೇವೇಂದ್ರಪ್ಪ ಮೇಲೆ ಕರಡಿ ಏಕಾಏಕಿ ದಾಳಿ ಮಾಡಿದೆ. ತಲೆ, ಮುಖ, ಕೈ ಹಾಗೂ ಹೊಟ್ಟೆ ಭಾಗದಲ್ಲಿ ಕರಡಿ ಪರಚಿದ್ದು, ತೀವ್ರ ರಕ್ತಸ್ರಾವವಾಗಿದ್ದ ದೇವೇಂದ್ರಪ್ಪರನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಕರಡಿ ದಾಳಿಯಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ಆತಂಕಗೊಂಡಿದ್ದು, ಅರಣ್ಯ ಇಲಾಖೆಯ ಅಧಿಕಾರಿ- ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ದಾಳಿ ಮಾಡಿದ ಕರಡಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.