ಶಿವಮೊಗ್ಗ : ನಿರ್ಮಲ ತುಂಗಾಭದ್ರಾ ಅಭಿಯಾನ- ಬೃಹತ್ ಜಲಜಾಗೃತಿ ಪಾದಯಾತ್ರೆಯ ಭಾಗವಾಗಿ ಶಿವಮೊಗ್ಗ ನಗರದಲ್ಲಿ ತುಂಗಾ ಆರತಿ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ಎಸ್.ಎನ್.ಚೆನ್ನಬಸಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ನಗರದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ತುಂಗಾ ಹಾಗೂ ಭದ್ರಾ ನದಿಯ ಪಾತ್ರದ ಜನರಿಗೆ ಜಲಮಾಲಿನ್ಯವಾಗುತ್ತಿರುವ ಬಗ್ಗೆ ಮಾಹಿತಿ ಹಾಗೂ ನದಿಯ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಲು ನಿರ್ಮಲ ತುಂಗಾಭದ್ರಾ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಈ ಅಭಿಯಾನದ ಭಾಗವಾಗಿ ಶಿವಮೊಗ್ಗ ನಗರದಲ್ಲಿ ತುಂಗಾ ಆರತಿ, ಪ್ರಬುದ್ಧರ ಸಭೆ ಹಾಗೂ ಯುವ ಜಾಗೃತಿ ಕಾರ್ಯಕ್ರಮವನ್ನ ರೂಪಿಸಿದ್ದು, ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
“ಕೋರ್ಪಲಯ್ಯ ಛತ್ರದ ಬಳಿ ತುಂಗಾ ಆರತಿ”
ನಿರ್ಮಲ ತುಂಗಾಭದ್ರಾ ಅಭಿಯಾನದ ಭಾಗವಾಗಿ ನವಂಬರ್ 10 ರ ಸಂಜೆ 6.30ಕ್ಕೆ ತುಂಗಾ ಆರತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಕೋರ್ಪಲಯ್ಯ ಛತ್ರ ಮಂಟಪದಲ್ಲಿ ತುಂಗಾರತಿ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಯನ್ನು ನಡೆಸಲಾಗಿದೆ.
ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ.
ಯುವ ಜಾಗೃತಿ ಹಾಗೂ ಪ್ರಬುದ್ಧರ ಸಭೆ:
ಈ ಅಭಿಯಾನದ ಭಾಗವಾಗಿ ನ.10 ರ ಬೆಳಿಗ್ಗೆ 8.30ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಪ್ರಬುದ್ಧರ ಸಭೆ ಆಯೋಜಿಸಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಸಂಚಾಲಕ ಬಸವರಾಜ್ ಪಾಟೀಲ್ ವೀರಾಪುರ, ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ ಕುಮಾರಸ್ವಾಮಿ ಮತ್ತು ಮುಖ್ಯ ಅತಿಥಿಯಾಗಿ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಭಾಗಿಯಾಗಲಿದ್ದಾರೆ.
ಇನ್ನು ನವೆಂಬರ್ 11 ರ ಬೆಳಿಗ್ಗೆ 8 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಯುವ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲೆಯ ಜನಪ್ರತಿನಿಧಿಗಳು, ಡಿಸಿ, ಎಸ್ಪಿ, ಸಿಇಓ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ- ಸಿಬ್ಬಂದಿಗಳು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿಗಳು ಕೂಡ ಭಾಗಿಯಾಗಲಿದ್ದಾರೆ ಎಂದು ಶಾಸಕ ಚೆನ್ನಬಸಪ್ಪ ಮಾಹಿತಿ ನೀಡಿದ್ದಾರೆ.