ಶಿವಮೊಗ್ಗ : ಊಟ ಬಡಿಸದ್ದಕ್ಕೆ ಕೋಪಗೊಂಡ ಪತಿ ತನ್ನ ಪತ್ನಿಯ ಕುತ್ತಿಗೆಗೆ ಟವೆಲ್ ಬಿಗಿದು ಕೊಲೆ ಮಾಡಿದ್ದಾನೆ.
ಶಿಕಾರಿಪುರ ತಾಲೂಕಿನ ಅಂಬ್ಲಿಗೋಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಗೌರಮ್ಮ (28) ಎಂಬ ಮಹಿಳೆ ಕೊಲೆಯಾಗಿದ್ದಾರೆ.
ಅಂಬ್ಲಿಗೋಳ ಗ್ರಾಮದ ಮನು ಎಂಬಾತ ಇಂದು ಸಂಜೆ ತನ್ನ ಪತ್ನಿ ಗೌರಮ್ಮನ ಕತ್ತನ್ನು ಟವೆಲ್ ನಿಂದ ಹಿಸುಕಿ, ಕೊಲೆ ಮಾಡಿದ್ದಾನೆ. ಆರೋಪಿ ಮನುವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇಂದು ಸಂಜೆ ಆರೋಪಿ ತನ್ನ ಪತ್ನಿ ಗೌರಮ್ಮಗೆ ಊಟ ಬಡಿಸಿಕೊಡುವಂತೆ ತಿಳಿಸಿದ್ದ. ಈ ವೇಳೆ ಗೌರಮ್ಮ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರಿಂದ, ಪತಿಗೆ ತಾನೇ ಬಡಿಸಿಕೊಳ್ಳುವಂತೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ಆತ, ಆಕೆಯ ಮೇಲೆ ಹಲ್ಲೆ ನಡೆಸಿ ಟವಲ್‌ನಿಂದ ಕುತ್ತಿಗೆ ಬಿಗಿದು, ಕೊಲೆ ಮಾಡಿರುವುದು ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕೊಲೆಯಾದ ಗೌರಮ್ಮ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಘಟನೆ ಸಂಬಂಧ ಆಕೆಯ ತಂದೆಯ ದೂರಿನ ಹಿನ್ನೆಲೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.