ಶಿವಮೊಗ್ಗ : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ, ಮೂವರು ಯುವಕರು ನಾಪತ್ತೆಯಾಗಿದ್ದಾರೆ.
ಜಿಲ್ಲೆಯ ಸಾಗರ ತಾಲೂಕಿನ ಕಳಸವಳ್ಳಿ ಬಳಿ ಶರಾವತಿ ಹಿನ್ನೀರಿನಲ್ಲಿ ಇಂದು ಸಂಜೆ ಘಟನೆ ನಡೆದಿದ್ದು, ಮೂವರು ಯುವಕರು ಕಣ್ಮರೆಯಾಗಿದ್ದಾರೆ.
ಸಿಗಂದೂರಿನ ಚೇತನ್ ಜೈನ್(28), ಹುಲಿದೇವರಬನ ಗ್ರಾಮದ ಸಂದೀಪ್ (30) ಹಾಗೂ ಗಿನಿವಾರದ ರಾಜು(28) ಶರಾವತಿ ಹಿನ್ನೀರಿನಲ್ಲಿ ನಾಪತ್ತೆಯಾಗಿದ್ದಾರೆ.
‘ಹಿನ್ನೀರಿನ ನಡುಗಡ್ಡೆಗೆ ಊಟಕ್ಕೆ ತೆರಳಿದ್ದ ಯುವಕರು.’
ತಾಲೂಕಿನ ಸಿಗಂದೂರು- ಕಳಸವಳ್ಳಿ ಬಳಿಯ ಶರಾವತಿ ಹಿನ್ನೀರಿನಲ್ಲಿರುವ ನಡುಗಡ್ಡೆಯಲ್ಲಿ ಊಟ ಮಾಡಲು 5 ಜನ ಯುವಕರು ಇಂದು ಮಧ್ಯಾಹ್ನ ತೆರಳಿದ್ದರು. ಊಟ ಮುಗಿಸಿ, ಸಂಜೆ ವಾಪಸ್ ಬರುವಾಗ ಸಮತೋಲನ ಕಳೆದುಕೊಂಡು ತೆಪ್ಪ ಮುಳುಗಿದೆ. ಈ ವೇಳೆ ವಿನಯ್ ಹಾಗೂ ಯಶವಂತ್ ಈಜಿಕೊಂಡು ದಡ ಸೇರಿದ್ದಾರೆ. ಈಜು ಬಾರದ ಮೂವರು ಯುವಕರು ಹಿನ್ನೀರಿನಲ್ಲಿ ಕಣ್ಮರೆಯಾಗಿದ್ದಾರೆ.
ಸಾಗರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿ- ಸಿಬ್ಬಂದಿ ಯುವಕರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ರಾತ್ರಿಯಾದ್ದರಿಂದ ಕಾರ್ಯಾಚರಣೆಗೆ ಹಿನ್ನಡೆಯಾಗಿದ್ದು, ಬೆಳಗ್ಗಿನಿಂದಲೇ ಮತ್ತೆ ಕಾರ್ಯಾಚರಣೆ ಮುಂದುವರಿಯಲಿದೆ.