ಶಿವಮೊಗ್ಗ : ಕಳಸವಳ್ಳಿ ಸಮೀಪ ಶರಾವತಿ ಹಿನ್ನೀರಿನಲ್ಲಿ ಹೊಳೆ ಊಟಕ್ಕಾಗಿ ತೆರಳಿದ್ದ ವೇಳೆ ತೆಪ್ಪ ಮಗುಚಿ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದ ಮೂವರು ಯುವಕರ ಶವ ಇದೀಗ ಪತ್ತೆಯಾಗಿದೆ.
ಸಾಗರ ತಾಲೂಕಿನ ಕಳಸವಳ್ಳಿ ಬಳಿ ಶರಾವತಿ ಹಿನ್ನೀರಿನಲ್ಲಿ ಸುಮಾರು 40 ಆಳದಲ್ಲಿ ಮೂವರು ಯುವಕರ ಶವ ಪತ್ತೆಯಾಗಿದ್ದು, ಅವುಗಳನ್ನ ಮೇಲೆತ್ತುವ ಕಾರ್ಯವನ್ನ ಈಶ್ವರ್ ಮಲ್ಪೆ ಅವರ ತಂಡ ಆರಂಭಿಸಿದೆ.
ಈಶ್ವರ ಮಲ್ಪೆ ತಂಡದಿಂದ ಮೃತದೇಹಗಳ ಶೋಧ:
ಕಳಸವಳ್ಳಿ ಸಮೀಪ ಶರಾವತಿ ಹಿನ್ನೀರಿನ ನಡುಗಡ್ಡೆಯಲ್ಲಿ ಊಟಕ್ಕೆ ತೆರಳಿದ್ದ ಐವರು ಯುವಕರ ಪೈಕಿ, ತೆಪ್ಪ ಮಗುಚಿದ್ದ ವೇಳೆ ಮೂವರು ನಿನ್ನೆ ಸಂಜೆ ಕಣ್ಮರೆಯಾಗಿದ್ದರು.
ಚೇತನ್ ಜೈನ್ ಸಿಗಂದೂರು(28), ಸಂದೀಪ್ ಹುಲಿದೇವರಬನ(30) ಹಾಗೂ ರಾಜೀವ್ ಗಿಣಿವಾರ(34) ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಸಲಾಗಿತ್ತು. ರಾತ್ರಿಯಾದ್ದರಿಂದ ಕಾರ್ಯಾಚರಣೆಗೆ ಹಿನ್ನಡೆ ಉಂಟಾಗಿತ್ತು. ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ, ನೀರಿನಾಳದಲ್ಲಿ ಇದ್ದ ಮೂವರು ಯುವಕರ ಶವವನ್ನ ಪತ್ತೆ ಮಾಡಿದೆ.
ಸ್ಥಳದಲ್ಲೇ ಪೋಸ್ಟ್ ಮಾರ್ಟಮ್ ಗೆ ವ್ಯವಸ್ಥೆ:
ಇನ್ನು ನೀರಿನಲ್ಲಿ ಮುಳುಗಿ ಮೃತಪಟ್ಟ ಮೂವರು ಯುವಕರ ಶವದ ಮರಣೋತ್ತರ ಪರೀಕ್ಷೆಗೆ ಸ್ಥಳದಲ್ಲೇ ತಾಲೂಕು ಆಡಳಿತ ವ್ಯವಸ್ಥೆ ಮಾಡಿದೆ. ಸ್ಥಳೀಯರ ಮನವಿ ಹಿನ್ನೆಲೆ ಸಾಗರ ತಾಲೂಕು ಆಸ್ಪತ್ರೆಯ ಬದಲಾಗಿ, ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲು ತಾಲೂಕು ಆಡಳಿತ ವ್ಯವಸ್ಥೆ ಮಾಡಿದೆ.