ಶಿವಮೊಗ್ಗ: ರಾಷ್ಟ್ರಭಕ್ತರ ಬಳಗದ ಸಂಚಾಲಕರಾದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿರುದ್ಧ ಮತ್ತೋಂದು ಕೇಸ್ ದಾಖಲಾಗಿದೆ.
ಧಾರ್ಮಿಕ ಭಾವನೆ ಕೆರಳುವ ರೀತಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಜಯನಗರ ಠಾಣೆ ಪೊಲೀಸರು, ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.
ಜಯನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಎಂ. ಸಿದ್ದೇಗೌಡ ಅವರು ನಿನ್ನೆ ನೀಡಿದ ದೂರಿನ ಮೇರೆಗೆ ಈಶ್ವರಪ್ಪರ ವಿರುದ್ಧ ಜಯನಗರ ಠಾಣೆಯ ಕೇಸ್ ನಂ.81/2024 ರಂತೆ, ಕಲಂ 196(1)(a), 299BNS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಕಳೆದ ನ.13 ರಂದು ಬೆಳಿಗ್ಗೆ ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ವಕ್ಫ್ ವಿಚಾರದಲ್ಲಿ ಮುಸಲ್ಮಾನರು ಮಾಡುವ ಅಚಾತುರ್ಯ ಗಮನಿಸಿಯೂ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರು ಸುಮ್ಮನಿದ್ದಾರೆ. ಅಂಬೇಡ್ಕರ್ ಇಸ್ಲಾಂ ಸೇರ್ಪಡೆ ಹೇಳಿಕೆ ಕೂಡ ಕಾಂಗ್ರೆಸ್ ನಾಯಕರು ಖಂಡನೆ ಮಾಡಲಿಲ್ಲ ಹಾಗೂ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲೀಮರಿಗೆ ಮೀಸಲಾತಿ ಕೊಡಲು ಚಿಂತಿಸುತ್ತಿದ್ದು, ಕಾಂಗ್ರೆಸ್ ಹಿಂದೂಸ್ಥಾನವನ್ನು ಪಾಕಿಸ್ತಾನ ಮಾಡಲು ಹೊರಟಿದೆ. ಹೀಗೆ ಆದರೆ, ಸಾಧು ಸಂತರ ನೇತೃತ್ವದಲ್ಲಿ ಧಂಗೆ ಏಳುವ ದಿನ ದೂರವಿಲ್ಲ. ಕಾಂಗ್ರೆಸ್ಸಿಗ್ಗರನ್ನು ಹುಡುಕಿ ಹೊಡೆದು ಕೊಲ್ಲುವಂತಹ ದಿನಗಳು ಬಂದರೂ ಆಶ್ಚರ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.
ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು, ಅನ್ಯಕೋಮಿನ ವಿರುದ್ಧ ದ್ವೇಷ ಭಾವನೆ ಕೆರಳಿಸುವ ಕೆಲಸ ಮಾಡಿದ್ದಾರೆ. ಸಮಾಜದಲ್ಲಿ ಅಸೌಹಾರ್ಧತೆ ಹೆಚ್ಚಿಸಲು ಪ್ರಚೋದನೆ ನೀಡಿದ್ದಾರೆ ಎಂದು ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.