Malenadu Mitra
Uncategorized ರಾಜ್ಯ ಶಿವಮೊಗ್ಗ

ವಿಕ್ರಂ ಗೌಡ ಎನ್ ಕೌಂಟರ್: ದಶಕದ ಬಳಿಕ ನಕ್ಸಲರ ಇರುವಿಕೆ ಮತ್ತೆ ಸಾಬೀತು

ಶಿವಮೊಗ್ಗ : ಕರ್ನಾಟಕದಲ್ಲಿ ಮತ್ತೆ ನಕ್ಸಲ್ ಎನ್ ಕೌಂಟರ್ ಆರಂಭವಾಗಿದ್ದು, ಸೋಮವಾರ ತಡರಾತ್ರಿ ನಡೆದ‌ ಪೊಲಿಸ್ ಎನ್ ಕೌಂಟರ್ ನಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ದಾನೆ. ಇದರಿಂದ ಹಲವು ವರ್ಷಗಳಿಂದ ತಣ್ಣಗಿದ್ದ ನಕ್ಸಲ್‌ ಚಟುವಟಿಕೆ ಮತ್ತೆ ತಲೆ ಎತ್ತಿದಂತಾಗಿದೆ. ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಡಿ ಪ್ರದೇಶ ಸೇರಿ ಶೃಂಗೇರಿ, ಕೊಪ್ಪ ಅರಣ್ಯ ವ್ಯಾಪ್ತಿಯಲ್ಲಿ ಎರಡು ದಶಕದ ಬಳಿಕ ಮತ್ತೆ ನಕ್ಸಲರ ಇರುವಿಕೆಯನ್ನು ಸಾಬೀತು ಮಾಡಿದೆ.
ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ಹಲವು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ನಕ್ಸಲ್ ನಾಯಕ‌ ವಿಕ್ರಂ ಗೌಡ ಹತನಾಗಿದ್ದಾನೆ.
ಸೋಮವಾರ ರಾತ್ರಿ ಐದು ಮಂದಿ ನಕ್ಸಲರ ತಂಡ ಪೀತಂಬೈಲು ಸಮೀಪ ಬಂದಿದ್ದ ವೇಳೆ ಎಎನ್ಎಫ್ ತಂಡ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ವಿಕ್ರಂ ಹತನಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ನಕ್ಸಲರು ಆಹಾರ ಸಾಮಗ್ರಿ ಖರೀದಿಗೆ ಬಂದಿದ್ದಾಗ ಎನ್‌ಕೌಂಟರ್ ನಡೆದಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ವಿಕ್ರಂ ಗೌಡ್ಲು ಮೂಲತಃ ಹೆಬ್ರಿಯವನಾಗಿದ್ದು, ಶೃಂಗೇರಿ, ಕಾರ್ಕಳ ಪ್ರದೇಶದಲ್ಲಿ ಸಕ್ರಿಯನಾಗಿದ್ದ. 2005ರಲ್ಲಿ ಸಾಕೇತ್‌ ರಾಜನ್ ಎನ್‌ಕೌಂಟರ್ ಬಳಿಕ ನಕ್ಸಲ್ ಚಟುವಟಿಕೆ ಕೊಂಚ ಕಡಿಮೆಯಾಗಿತ್ತು. 2007 ರ ಏಪ್ರಿಲ್ 10ರಂದು ಒಡೆಯರಮಠ ಗ್ರಾಮದ ಮನೆಯೊಂದರಲ್ಲಿ ಒಬ್ಬರು ನಕ್ಸಲರು ಸೇರಿ ಮೂವರ ಎನ್‌ಕೌಂಟರ್ ಆಗಿತ್ತು. ಬಳಿಕ ನಕ್ಸಲ್ ಚಟುವಟಿಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಪೂರ್ಣ ಕಡಿಮೆಯಾಗಿತ್ತು. 14 ವರ್ಷಗಳ ಬಳಿಕ ಈಗ ಮತ್ತೆ ನಕ್ಸಲರು ಕಾಣಿಸಿಕೊಂಡಿದ್ದಾರೆ. ಅರಣ್ಯ ಒತ್ತುವರಿ ತೆರವಿನ ವಿರುದ್ಧ ಜನ ಆಕ್ರೋಶಿತರಾಗಿದ್ದು, ಈ ವೇಳೆ ನಕ್ಸಲರು ಓಡಾಡುತ್ತಿರುವುದು ಮಲೆನಾಡಿನಲ್ಲಿ ಆತಂಕ ಹೆಚ್ಚಿಸಿದೆ.

ಕೇರಳದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಚುರುಕುಗೊಂಡ ಬಳಿಕ ನಕ್ಸಲರು ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದತ್ತ ಮುಖಮಾಡಿದ್ದಾರೆ ಎನ್ನಲಾಗಿದೆ‌. ಉಳಿದ ನಕ್ಸಲರಿಗಾಗಿ ಶೋಧಕಾರ್ಯ ತೀವ್ರಗೊಂಡಿದೆ.

– – – – – – – – – – – – – – – – – – – – – – – –

ಯಾರು ಈ ವಿಕ್ರಂ ಗೌಡ…?

ಹಲವು ವರ್ಷಗಳಿಂದ ಪೊಲೀಸರ ಕಣ್ಣಳತೆಯಿಂದ ತಪ್ಪಿಸಿಕೊಂಡು ತಲೆ ಮರೆಸಿಕೊಂಡು ಓಡಾಡುತ್ತಿದ್ದ ವಿಕ್ರಂ ಗೌಡ್ಲು, ಮೂಲತಃ ಉಡುಪಿಯ ಹೆಬ್ರಿ ತಾಲ್ಲೂಕಿನ ಕೂಡ್ಲು ನಾಡ್ವಾಲು ಗ್ರಾಮ ನಿವಾಸಿ. ಆದಿವಾಸಿ ಗೌಡ್ಲು ಸಮುದಾಯಕ್ಕೆ ಸೇರಿದ ವಿಕ್ರಂ ಗೌಡ ಅತ್ಯಂತ ಕಡುಬಡತನದ ಕುಟುಂಬಕ್ಕೆ ಸೇರಿದವನು. ಐದನೇ ತರಗತಿವರೆಗೆ ಶಾಲೆ ಕಲಿತಿದ್ದ. ಅರಣ್ಯ ಉತ್ಪನ್ನಗಳೇ ಈ ಕುಟುಂಬ ಜಿವನೋಪಾಯಕ್ಕೆ ಆಧಾರವಾಗಿತ್ತು. 90 ರ ದಶಕದ ಆರಂಭದಲ್ಲಿ ಕಾಡಿನ ಉತ್ಪನ್ನ( ಮುರುಗನಹುಳಿ, ದೂಪ, ಜೇನು ತುಪ್ಪ..ಇತ್ಯಾದಿ) ಗಳನ್ನು ತಂದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಆದರೆ, ಕುದುರೆಮುಖ ರಾಷ್ಟ್ರೀಯ ಉದ್ಯಾನ ಘೋಷಣೆ ಆದ ಬಳಿಕ ಅರಣ್ಯ ಇಲಾಖೆ ಕಾಡಿನ ಉತ್ಪನ್ನ ಸಂಗ್ರಹಕ್ಕೆ ನಿಷೇಧ ಹೇರಿತು. ಇದರಿಂದ, ಗೌಡ್ಲು ಸಮುದಾಯದ ಆದಿ ವಾಸಿಗಳಿಗೆ ಜೀವನ ನಡೆಸುವುದೇ ದುಸ್ತರವಾಗಿತ್ತು. ಇದರಿಂದ, ಆಗಾಗ್ಯೆ ಆರಣ್ಯ ಇಲಾಖೆ ಮತ್ತು ಆದಿವಾಸಿಗಳ ನಡುವೆ ಈ ವಿಚಾರವಾಗಿ ಸಂಘರ್ಷಗಳು ನಡೆಯುತ್ತಿತ್ತು. ಇಲ್ಲಿ ಆದಿವಾಸಿಗಳ ಪರವಾದ ಹೋರಾಟದಲ್ಲಿ ವಿಕ್ರಂ ಗೌಡ್ಲು ಮುಂಚೂಣಿಯಲ್ಲಿದ್ದನು. ಇದಾದ ಬಳಿಕ ಬದಲಾದ ಸನ್ನಿವೇಶದಲ್ಲಿ ರಾಜ್ಯದಲ್ಲಿ ಹುಟ್ಟಿಕೊಂಡ ನಕ್ಸಲ್‌ ಸಂಘಟನೆಗೆ ವಿಕ್ರಂ ಸೇರಿಕೊಂಡಿದ್ದ. ಸಂಘಟನೆಯಲ್ಲಿ ವಿವಿಧ ಜವಬ್ದಾರಿಗಳನ್ನು ವಿಕ್ರಂ ಗೌಡ್ಲು ನಿಭಾಯಿಸುತ್ತಿದ್ದ. ರಾಜ್ಯದಿಂದ ಚಳವಳಿ ಸ್ಥಳಾಂತರವಾದ ಬಳಿಕ ಕೇರಳದಲ್ಲಿ ವಿಕ್ರಂ ಸಕ್ರಿಯನಾಗಿದ್ದ.

ಉಷಾ ಪತ್ನಿ:

ಕೇರಳದಲ್ಲಿ ಬಂಧಿತನಾಗಿದ್ದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿಯೊಂದಿಗೆ ಕೇರಳ ಪೊಲೀಸರಿಗೆ ಸೆರೆಸಿಕ್ಕ ಉಷಾ ವಿಕ್ರಂಗೌಡನ ಪತ್ನಿಯಾಗಿದ್ದಾಳೆ. ವಿಕ್ರಂ ಗೌಡ್ಲು ಪತ್ನಿ ಉಷಾ ಈಗ ಜೈಲು ವಾಸದಲ್ಲಿದ್ದಾಳೆ.

ರಾಜ್ಯದ ನಾಯಕತ್ವ:

ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯ ನಾಯಕತ್ವ ತಮಿಳುನಾಡು ಮೂಲದ ಕುಪ್ಪುಸ್ವಾಮಿ ವಹಿಸಿಕೊಂಡಿದ್ದರೆ, ರಾಜ್ಯದಲ್ಲಿನ ಜವಾಬ್ದಾರಿ ವಿಕ್ರಂ ಗೌಡ ಹೆಗಲಿಗೆ ಬಿದ್ದಿತ್ತು. 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿರುವ ವಿಕ್ರಂ ಗೌಡ ಕಳೆದ 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ವಿಕ್ರಂ ಗೌಡ ಮೂರು ಬಾರಿ ಕರ್ನಾಟಕ ಪೊಲೀಸರ ಕೈಯಿಂದ ಪರಾರಿಯಾಗಿದ್ದ. 2016ರಲ್ಲಿ ಕೇರಳ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿದ್ದ.

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಗೆ ವಿಕ್ರಂ ಗೌಡ ವಿರೋಧ ಹೊಂದಿದ್ದ. ಅಷ್ಟೇ ಅಲ್ಲದೇ ಈ ಯೋಜನೆಯಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದಕ್ಕೆ ಗೌರಿ ಲಂಕೇಶ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಿತ್ತಿಪತ್ರಗಳನ್ನೂ ಕೂಡ ಹಂಚಿದ್ದ.

“ವಿಕ್ರಂ ಗೌಡ್ಲು ಬರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡಾಗ ನಕ್ಸಲ್ ತಂಡ ಗುಂಡಿನ ದಾಳಿ ನಡೆಸಿದೆ. ಆಗ ಪೊಲೀಸರು ಅನಿವಾರ್ಯವಾಗಿ ಎನ್ಕೌಂಟರ್ ಮಾಡಿದ್ದಾರೆ. ಇನ್ನು ವಿಕ್ರಂ ಜೊತೆಯಲ್ಲಿದ್ದ ಇಬ್ಬರು ಮೂವರು ಓಡಿ ಹೋಗಿದ್ದು, ಆ ಭಾಗದಲ್ಲಿ ಕೂಂಬಿಂಗ್ ಮುಂದುವರೆದಿದೆ.
– ಡಾ ಜಿ.ಪರಮೇಶ್ವರ್, ಗೃಹ ಸಚಿವ

ಮಲೆನಾಡಲ್ಲಿ ನಕ್ಸಲ್ ಹೆಜ್ಜೆ:

ನ.10 ರಂದು ಕೊಪ್ಪ ತಾಲ್ಲೂಕಿನ ಕಡೇಗುಂದಿ ಗ್ರಾಮಕ್ಕೆ ಮುಂಡಗಾರು ಲತಾ ಹಾಗೂ ಜಯಣ್ಣ ಭೇಟಿ ನೀಡಿದ್ದ ಮಾಹಿತಿ ಆಧರಿಸಿ ಕೂಂಬಿಂಗ್‌ ಚುರುಕುಗೊಂಡಿತ್ತು. ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲ ಮನೆಗಳಿಗೆ ನಕ್ಸಲರು ಭೇಟಿ ನೀಡಿದ ಬಗ್ಗೆ ಸುದ್ದಿಯಾಗಿತ್ತು. ಕೊಪ್ಪ ತಾಲ್ಲೂಕಿನ ಎಡಗುಂದ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿ, ಅರಣ್ಯ ಒತ್ತುವರಿ ಮತ್ತು ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಮಲೆನಾಡು ಮತ್ತು ಕರಾವಳಿಯಲ್ಲಿರುವ ಜನವಿರೋಧಿ ಅಲೆಯನ್ನು ಬಳಸಿಕೊಂಡು ಸಂಘಟನೆ ಬಲಪಡಿಸುವ ಉದ್ದೇಶವನ್ನು ನಕ್ಸಲರು ಹೊಂದಿದ್ದರು. ಆದರೆ ವಿಕ್ರಂಗೌಡ ಹತ್ಯೆಯಿಂದ ಇದಕ್ಕೆ ಹಿನ್ನಡೆಯಾಗಿದೆ.

ಮಾರ್ಚ್ ನಲ್ಲಿ ದಕ್ಷಿಣ ಕನ್ನಡ- ಕೊಡಗು ಗಡಿ ಭಾಗದ ಕೂಜಿಮಲೆಯ ಎಸ್ಟೇಟ್‌ ಅಂಗಡಿಗೆ ನಕ್ಸಲರು ಭೇಟಿ ನೀಡಿದ್ದರು. ಮಾ. 23ರಂದು ಕಡಬ ತಾಲ್ಲೂಕಿನಲ್ಲಿ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿ ಊಟ ಮಾಡಿ ತೆರಳಿದ್ದರು.
ಮಲೆನಾಡಲ್ಲಿ 2002ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ನಕ್ಸಲ್‌ ಚಟುವಟಿಕೆ ಸತತ ಒಂದು ದಶಕಕ್ಕೂ ಹೆಚ್ಚು ಕಾಲ ರಕ್ತಸಿಕ್ತ ಅಧ್ಯಾಯವನ್ನೇ ತೆರೆದಿಟ್ಟಿತ್ತು. ನಕ್ಸಲರು ಮತ್ತು ಪೊಲೀಸ್‌, ಅರಣ್ಯ ಇಲಾಖೆ ನಡುವಿನ ಕಾದಾಟದಲ್ಲಿ ಹಲವು ಜೀವಗಳು ಬಲಿಯಾಗಿದ್ದವು.

ಮಾರಕ ಯೋಜನೆಗಳಿಗೆ ವಿರೋಧ:

ಮಲೆನಾಡಿನ ಜನರ ಬದುಕಿಗೆ ಮಾರಕವಾಗಿರುವ ಕಸ್ತೂರಿ ರಂಗನ್‌ ವರದಿ, ಅರಣ್ಯ ಒತ್ತುವರಿ ತೆರವು, ಸೆಕ್ಷನ್‌-4, ಕುದುರೆಮುಖ ರಾಷ್ಟ್ರೀಯ ಉದ್ಯಾನ ಜಾರಿ, ನಿವೇಶನ ರಹಿತರಿಗೆ ದಶಕಗಳು ಕಳೆದರೂ ನಿವೇಶನ ನೀಡದಿರುವುದು ಮಲೆನಾಡಿಗರನ್ನು ಆತಂಕಕ್ಕೆ ತಳ್ಳಿದೆ. ಇದರ ವಿರುದ್ಧ ಹಲವು ಸಂಘಟನೆಗಳು ಹೋರಾಟ ನಡೆಸುತ್ತಲೇ ಇವೆ. ಸರ್ಕಾರದ ಜನವಿರೋಧದ ನಡೆಗಳು ಸಹ ಮಲೆನಾಡಿನಲ್ಲಿಮತ್ತೆ ನಕ್ಸಲ್‌ ಚಟುವಟಿಕೆಗೆ ಇಂಬು ನೀಡುತ್ತಿದೆ ಎನ್ನಲಾಗುತ್ತಿದೆ. ಇತ್ತ ಪೊಲೀಸರು ಸಹ ನಕ್ಸಲರ ಹೆಡೆಮುರಿ ಕಟ್ಟಲು ಕಳೆದ ಐದು ದಿನಗಳಿಂದ ಕೊಪ್ಪ, ಶೃಂಗೇರಿ ತಾಲ್ಲೂಕಿನ ದೇವಾಲೆಕೊಪ್ಪ, ಕೆರೆಕಟ್ಟೆ, ಕಿಗ್ಗಾ ನಕ್ಸಲ್‌ ನಿಗ್ರಹ ದಳ ಕ್ಯಾಂಪ್‌ ಸಿಬ್ಬಂದಿ ಬಿರುಸಿನ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಒಟ್ಟಾರೆ, ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ ಅಂತ್ಯ ಕಂಡಿತು ಎಂದುಕೊಳ್ಳುವ ಹೊತ್ತಿಗೆ ಕಳೆದ ವಾರ ಉಡುಪಿ ಜಿಲ್ಲೆಯ ಹೆಬ್ರಿ ಅರಣ್ಯ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆ ಕಾಣಿಸಿಕೊಂಡ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇಲ್ಲಿ ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್‌) ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಪೊಲೀಸರು ವಿಕ್ರಂ ಗೌಡ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಆತನನ್ನು ಸೆರೆಹಿಡಿಯಲು ಮತ್ತು ಎನ್‌ಕೌಂಟರ್ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Ad Widget

Related posts

ಶಿವಮೊಗ್ಗದಲ್ಲಿ ೪೫ ಸ್ಮಾರ್ಟ್ ಸ್ಕೂಲ್ ಲೋಕಾರ್ಪಣೆ, ನೂರಾರು ಕೋಟಿ ಮೊತ್ತದ ಕಾಮಗಾರಿಗೆ ಅಡಿಗಲ್ಲು

Malenadu Mirror Desk

ಕೊರೊನ ಸಂಕಷ್ಟದಲ್ಲಿ ವೈದ್ಯರ ಸೇವೆ ಅನನ್ಯವಾದುದು

Malenadu Mirror Desk

ಅರುಣ್ ಸಾವಿಗೆ ಯಾವ ಕಾರಣವಿತ್ತು ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.