ತೀರ್ಥಹಳ್ಳಿ: ತುಂಗಾನದಿ ದಡದಲ್ಲಿ ಚಪ್ಪಲಿ, ಮೊಬೈಲ್ ಬಿಟ್ಟು ಕಣ್ಮರೆಯಾಗಿದ್ದ ಬ್ಯಾಂಕ್ ಮ್ಯಾನೇಜರ್ ಶವವಾಗಿ ಪತ್ತೆಯಾಗಿದ್ದಾರೆ.
ತೀರ್ಥಹಳ್ಳಿ ತಾಲೂಕು ಅರಳಸುರುಳಿಯ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಶ್ರೀವತ್ಸ (38) ಅವರ ಶವ ತುಂಗಾನದಿಯಲ್ಲಿ ಪತ್ತೆಯಾಗಿದೆ.
ಪಟ್ಟಣದ ರಾಮೇಶ್ವರ ದೇವಾಲಯ ಸಮೀಪ ತುಂಗಾನದಿಯ ತೆಪ್ಪೋತ್ಸವ ನಡೆಯುವ ಜಾಗದಲ್ಲಿ ಮುಳುಗಿ ಸೋಮವಾರದಿಂದ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಸಲಾಗಿತ್ತು. ನದಿ ದಡದಲ್ಲಿ ಶ್ರೀವಾಸ್ತವ ಅವರ ಮೊಬೈಲ್, ಉಡುಪುಗಳು ಹಾಗೂ ಚಪ್ಪಲಿ ಇದ್ದ ಕಾರಣ ನದಿಯಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿತ್ತು. ಅದರಂತೆ ಇಂದು ಬೆಳಿಗ್ಗೆ ಬ್ಯಾಂಕ್ ಮ್ಯಾನೇಜರ್ ಶವ ಪತ್ತೆಯಾಗಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣದ ಶ್ರೀವಾಸ್ತವ ಅವಿವಾಹಿತರಾಗಿದ್ದು, ಕಳೆದ ಜೂನ್ ನಲ್ಲಿ ಅರಳಿಸುರಳಿಯ ಯೂನಿಯನ್ ಬ್ಯಾಂಕ್ ಶಾಖೆಗೆ ಮ್ಯಾನೇಜರ್ ಆಗಿ ವರ್ಗಾವಣೆಗೊಂಡಿದ್ದರು. ತೀರ್ಥಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದ ಮ್ಯಾನೇಜರ್, ಕನಕ ಜಯಂತಿ ಪ್ರಯುಕ್ತ ಸೋಮವಾರ ರಜೆ ಇದ್ದ ಕಾರಣ, ತುಂಗಾ ನದಿಗೆ ಸ್ನಾನಕ್ಕೆ ಹೋಗಿದ್ದರು ಎನ್ನಲಾಗಿದೆ.
ಘಟನೆ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.