ಶಿವಮೊಗ್ಗ : ರೈತರಿಗೆ ಬೆಳೆ ಸಾಲ ಸೇರಿದಂತೆ ಜಿಲ್ಲೆಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಿಸಿಸಿ ಬ್ಯಾಂಕ್ ನ ಮತ್ತಷ್ಟು ಶಾಖೆಗಳು ಶೀಘ್ರವೇ ಕಾರ್ಯಾರಂಭ ಮಾಡಲಿವೆ.
ಆರ್ ಬಿಐ ಅನುಮತಿ ಪಡೆದು ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ನಿಂದ ಮೂರು ಹೊಸ ಶಾಖೆ ಆರಂಭಿಸಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ
ಆರ್.ಎಂ.ಮಂಜುನಾಥ ಗೌಡ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ನಿಂದ 22 ಶಾಖೆಗಳ ಆರಂಭಿಸಲು ಆರ್ ಬಿಐ ಗೆ ಅನುಮತಿ ಕೋರಲಾಗಿತ್ತು. ಅದರಂತೆ 3 ಶಾಖೆಗಳ ಪ್ರಾರಂಭಕ್ಕೆ ಇದೀಗ ಅನುಮತಿ ದೊರೆತಿದೆ. ಇದರಿಂದ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಶಾಖೆಗಳ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಎಂದರು.
ಡಿಸೆಂಬರ್ 6 ರಿಂದ ಸೊರಬ ತಾಲೂಕಿನ ಜಡೆ, ಡಿ.12 ರಿಂದ ಶಿಕಾರಿಪುರದ ಸುಣ್ಣದಕೊಪ್ಪ ಹಾಗೂ ಡಿ.18 ರಿಂದ ಭದ್ರಾವತಿ ತಾಲೂಕಿನ ಕಲ್ಲಿಹಾಳದಲ್ಲಿ ಡಿಸಿಸಿ ಬ್ಯಾಂಕ್ ನ ಶಾಖೆಗಳು ಕಾರ್ಯಾರಂಭ ಮಾಡಲಿವೆ. ಉಳಿದ 19 ಶಾಖೆಗಳನ್ನು ಸಹ ಅನುಮತಿ ಪಡೆದು ಆರಂಭ ಮಾಡ್ತೇವೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ನಿಂದ 1.05 ಲಕ್ಷ ರೈತರಿಗೆ 1180 ಕೋಟಿ ರೂ. ಬೆಳೆ ಸಾಲ ನೀಡಿದ್ದೇವೆ. ನಬಾರ್ಡ್ ಸಹಾಯಧನ ಕಡಿಮೆಯಾದ್ರೂ ಕೂಡ 200 ಕೋಟಿಯಷ್ಟು ಹೊಸ ಸಾಲವನ್ನು ನೀಡಿದ್ದೇವೆ ಎಂದರು.
ಬಡವರಿಗೆ ಅನುಕೂಲ ಮಾಡಿಕೊಡಲು ನಬಾರ್ಡ್ ಸ್ಥಾಪನೆಯಾಗಿತ್ತು. ಆದರೆ, ಆ ಉದ್ದೇಶದಿಂದ ನಬಾರ್ಡ್ ಹಿಂದೆ ಸರಿಯುತ್ತಿದೆ. ನಬಾರ್ಡ್ ಪುನರ್ಧನ ನಿಲ್ಲಿಸಿರುವ ಬಗ್ಗೆ ಸಿಎಂ ಈಗಾಗಲೇ ನಮ್ಮ ಜೊತೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ನಬಾರ್ಡ್ ಸಹಾಯಧನದ ಬಗ್ಗೆ ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವರ ಬಳಿ ಮಾತನಾಡಿದ್ದು, ಅದಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಮಂಜುನಾಥ ಗೌಡ ಹೇಳಿದ್ದಾರೆ.
ಜಿಲ್ಲೆಯ 19358 ರೈತರಿಗೆ ಒಟ್ಟು ಬೆಳೆ ವಿಮಾ ಪರಿಹಾರ ರೂ. 45 ಕೋಟಿ ಬಿಡುಗಡೆಯಾಗಿದ್ದು, ಈ ಪೈಕಿ ಬ್ಯಾಂಕಿನಿಂದ ಜಮಾ ಪಡಿಸಿದ 8873 ರೈತರಿಗೆ 19.17 ಕೋಟಿ ವಿಮಾ ಪರಿಹಾರ ನೇರವಾಗಿ ಅವರ ಉಳಿತಾಯ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.