ಶಿವಮೊಗ್ಗ : ಮಾಜಿ ಡಿಸಿಎಂ ಹಾಗೂ ರಾಷ್ಟ್ರಭಕ್ತರ ಬಳಗದ ಸಂಚಾಲಕರಾದ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗದಲ್ಲಿ ಮತ್ತೋಂದು ಸುಮೋಟೋ ಕೇಸ್ ದಾಖಲಾಗಿದೆ.
ಪ್ರಚೋದನಾಕಾರಿ ಭಾಷಣ ಹಾಗೂ ಅನ್ಯ ಧರ್ಮದ ವಿರುದ್ಧ ಕೋಮು ಭಾವನೆ ಕೆರಳಿಸಲು ಪ್ರೇರಣೆ ನೀಡಿದ್ದಾರೆ ಎಂಬ ಕಾರಣಕ್ಕೆ ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಕೋಟೆ ಪೊಲೀಸ ಠಾಣೆ ಇನ್ಸ್ಪೆಕ್ಟರ್ ಹರೀಶ್ ಕೆ. ಪಟೇಲ್ ನೀಡಿದ ದೂರಿನ ಮೇರೆಗೆ ಈಶ್ವರಪ್ಪ ವಿರುದ್ಧ ಕೋಟೆ ಠಾಣೆಯಲ್ಲಿ ಗುನ್ನೆ ನಂ 187/2024, ಬಿಎನ್ ಎಸ್, 2023(u/s-196(1), 299 ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂ ಸಂತರ ಬಂಧನ ಹಾಗೂ ಹಿಂದೂಗಳ ಮೇಲಿನ ಹಲ್ಲೆ ಖಂಡಿಸಿ, ಹಿಂದೂ ರಕ್ಷಣಾ ಸಮಿತಿ, ವಿಶ್ವ ಹಿಂದೂ ಪರಿಷತ್ ನಿಂದ ಡಿಸೆಂಬರ್ 3 ರಂದು ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿದ್ದ ಈಶ್ವರಪ್ಪ, ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ ಎಂದು ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ.
ಈ ಮುಸಲ್ಮಾನರು ಅನ್ನ ಹಾಕಿದ ಮನೆಗೆ ಕನ್ನ ಹಾಕುವ ರಕ್ತದವರು ಅನ್ನೋದರಲ್ಲಿ ಯಾವ ಅನುಮಾನವಿಲ್ಲ, ಭಾರತದಲ್ಲಿರುವ ಹಿಂದೂಗಳು ಈ ದೇಶದಲ್ಲಿನ ಮುಸಲ್ಮಾನರಿಗೆ ಸಿಕ್ಕ ಸಿಕ್ಕಲ್ಲಿ, ಸಿಕ್ಕಿದ್ದನ್ನು ತಗೊಂಡು ಹೊಡೆಯಲು ಶುರು ಮಾಡಿದರೆ ಮುಸಲ್ಮಾನರು ಉಳಿತ್ತಾರ..? ಎಂದು ಈಶ್ವರಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಕೋಮು ಪ್ರಚೋದನೆ ಜೊತೆಗೆ ಅನ್ಯಕೋಮಿನ ವಿರುದ್ಧ ದ್ವೇಷ ಭಾವನೆ ಹಾಗೂ ಅಸೌಹಾರ್ದತೆ ಸೃಷ್ಟಿಸಲು ಈಶ್ವರಪ್ಪ ಯತ್ನಿಸಿದ್ದಾರೆ ಎಂದು ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಕಳೆದ 20 ದಿನಗಳ ಹಿಂದೆಯಷ್ಟೇ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ವಕ್ಫ್ ವಿಚಾರದಲ್ಲಿ ಈಶ್ವರಪ್ಪ ಅವರು ಮಾತನಾಡಿದ್ದಕ್ಕೆ ಜಯನಗರ ಇನ್ಸ್ಪೆಕ್ಟರ್ ನೀಡಿದ ದೂರಿನ ಮೇರೆಗೆ ಮೊದಲ ಸುಮೋಟೋ ಕೇಸ್ ದಾಖಲಾಗಿತ್ತು.
previous post