ಶಿವಮೊಗ್ಗ : ಅದೊಂದು ಕಳ್ಳುಬಳ್ಳಿಯ ಕಲರವ, ಹತ್ತಿರದ ಬಂಧುಗಳಂತೆ ಅಪ್ಪಿ ಕೊಳ್ಳುವ, ಕಷ್ಟ -ಸುಖ ಬೆಳೆ ಬೇಸಾಯದ ಬಗ್ಗೆ ವಿಚಾರ ವಿನಿಮಯ, ಸಾಂಪ್ರದಾಯಿಕ ಉಡುಗೆ, ಸಂಸ್ಕೃತಿಯ ಪ್ರತಿಬಿಂಬಂದಂತೆ ಅಲಂಕೃತ ವೇದಿಕೆ. ನೆರೆದ ಎಲ್ಲರೂ ನಮ್ಮವರೇ ಎಂಬ ಭಾವ ಬಂಧನ. ಸಮುದಾಯದ ಅಸ್ಮಿತೆಯಾದ ಬೂಮಣ್ಣಿ ಬುಟ್ಟಿ ಮತ್ತು ಹಸೆ ಚಿತ್ತಾರ ಕಲೆಯ ಅನಾವರಣ…. ಇದು ಭಾನುವಾರ ನಗರದ ಈಡಿಗರ ಭವನದಲ್ಲಿ ನಡೆದ ದೀವರ ಸಾಂಸ್ಕೃತಿಕ ವೈಭವ-೨೦೨೪ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯ. ದೀರ ದೀವರ ಬಳಗ ಮತ್ತು ಹಳೆಪೈಕ ಸಂಸ್ಕೃತಿ ಸಂವಾದ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲೆನಾಡಿನ ದೀವರ ಸಮುದಾಯದ ಸಂಸ್ಕೃತಿಯ ದರ್ಶನವಾಯಿತು.
ಸಾಂಪ್ರದಾಯಿಕ ಪಟ್ಟಿ ಸೀರೆಯುಟ್ಟ ಹಿರಿಯ ಮಹಿಳೆಯರು ಇಡಕಲು ಪೂಜೆ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು, ಸಾಂಪ್ರದಾಯಿಕವಾಗಿ ಅಲಂಕೃತಗೊಂಡ ದೀಪಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ನಮ್ಮ ಕಲೆ ಮತ್ತು ಸಂಸ್ಕೃತಿಗಳಿಗೆ ಪ್ರಕೃತಿಯೇ ಪ್ರೇರಣೆ. ಮಲೆನಾಡಿನ ದೀವರ ಸಮುದಾಯ ಪ್ರಕೃತಿಯನ್ನೇ ಆರಾಧಿಸುವ ಜನಾಂಗ. ಪ್ರಕೃತಿಯ ಲಯದಲ್ಲಿಯೇ ಬೆಳೆದು ಬಂದ ಸಂಸ್ಕೃತಿ ಕಾಲಕ್ಕೆ ಅನುಗುಣವಾಗಿ ರೂಪಾಂತರ ಆಗುತ್ತಲೇ ಇದೆ. ದೀವರು ಜನಾಂಗದ ಕಲಾ ಪರಂಪರೆ ಶ್ರೀಮಂತವಾದುದು. ನಾಗರೀಕತೆ ಬೆಳೆದಂತೆ ನಮ್ಮ ಮೂಲ ಕಲೆ ಕಡಿಮೆಯಾಗುತ್ತದೆ. ನಮ್ಮ ಜೀವನ ಪದ್ಧತಿಯೇ ಒಂದು ವಿಭಿನ್ನ ಮತ್ತು ಈ ನೆಲದ ಮೂಲವಾಗಿದೆ. ಜಿಲ್ಲೆಯ ಸಮಾನ ಮನಸ್ಕರು ಸೇರಿ ಸಂಘಟನೆ ಮಾಡಿಕೊಂಡು ಚಿತ್ತಾರ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸೋದರನ ಪ್ರಶಂಸೆ:
ಶಿವಮೊಗ್ಗದಲ್ಲಿ ಬಹು ಸಂಖ್ಯಾತರಾದ ಈಡಿಗ ಸಮುದಾಯಕ್ಕೆ ಸಾಕಷ್ಟು ಕೆಲಸಗಳು ಆಗಿವೆ. ಸಭಾ ಭವನಗಳು, ನಾರಾಯಣ ಗುರು ವಸತಿ ಶಾಲೆಯಂತಹ ಕೆಲಸಗಳು ಆಗಬೇಕಿವೆ. ನಮ್ಮ ತಂದೆ ಬಂಗಾರಪ್ಪನವರು, ಕಾಗೋಡು ತಿಮ್ಮಪ್ಪ, ಯಡಿಯೂರಪ್ಪ ಅವರಂತಹ ನಾಯಕರು ಈ ಸಮುದಾಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈಗ ನನ್ನ ತಮ್ಮನೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಸಮುದಾಯದ ಪರ ಕೆಲಸ ಮಾಡುತಿದ್ದಾರೆ. ಬಾಕಿ ಇರುವ ಕೆಲಸಗಳನ್ನು ಅವರು ಮುಂದುವರಿಸುವ ವಿಶ್ವಾಸವಿದೆ ಎಂದು ಕುಮಾರಬಂಗಾರಪ್ಪ ಅವರು, ಸೋದರ ಮಧುಬಂಗಾರಪ್ಪ ಅವರನ್ನು ಪ್ರಶಂಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, ಗ್ರಾಮೀಣ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸಗಳು ಆಗಬೇಕು. ದೀವರ ಬುಟ್ಟಿ ಮತ್ತು ಚಿತ್ತಾರ ಕಲೆಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಧೀರ ದಿವರ ಬಳಗ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ. ಮುಂದೆಯೂ ಈ ರೀತಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ನಮ್ಮ ಕಲೆ ಮತ್ತು ಸಂಸ್ಕೃತಿ ಉಳಿಯಬೇಕು ಎಂದು ಹೇಳಿದರು. ಶ್ರೀಧರ್ ಈಡೂರು ಸ್ವಾಗತಿಸಿದರು. ನಾಗರಾಜ್ ನೇರಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಅಣ್ಣಪ್ಪ ಮಳೀಮಠ್ ಮತ್ತು ಶ್ವೇತಾ ಮುಡುಬ ಕಾರ್ಯಕ್ರಮ ನಿರೂಪಿಸಿದರು.
ಐವರು ಗಣ್ಯರಿಗೆ ಧೀರ ದೀವರ ಪ್ರಶಸ್ತಿ ಪ್ರದಾನ
ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕ ಈಡೂರು ಪರಶುರಾಮಪ್ಪ ಅವರ ಸೇವೆಯನ್ನು ಪರಿಗಣಿಸಿ ಅವರ ಪತ್ನಿ ರಾಧಮ್ಮ ಈಡೂರು, ಹಿರಿಯ ಸಮಾಜವಾದಿ ಹೋರಾಟಗಾರ ಬಿದರಳ್ಳಿ ಪುರುಷೋತ್ತಮ, ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ, ಜನಪರ ಹೋರಾಟಗಾರ ರಾಜಪ್ಪ ಮಾಸ್ತರ್, ಖ್ಯಾತ ನಾಟಿ ವೈದ್ಯ ಈಶ್ವರ ನಾಯ್ಕ್ ಮುಡುಬ ಅವರಿಗೆ ಧೀರ ದೀವರು ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಸೆ ಚಿತ್ತಾರ ಕಲಾವಿದೆಯರಿಗೆ ರಾಜ್ಯಮಟ್ಟದ ಚಿತ್ತಾರಗಿತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯರನ್ನು ಪುರಸ್ಕರಿಸಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ದೀವರ ಜೀವನ ಕ್ರಮವೇ ಒಂದು ಸಂಪದ್ಬರಿತ ಪರಂಪರೆಯಾಗಿದೆ. ಬಾಲ್ಯದಲ್ಲಿ ನಾನೂ ಕೂಡಾ ಈ ಎಲ್ಲದರ ಭಾಗವಾಗಿದ್ದೆ. ದೀವರು ಸೇರಿದಂತೆ ಹಿಂದುಳಿದ ಸಮುದಾಯಗಳ ಯುವಜನರು ಇಂದು ಮೊಬೈಲ್ ಹಿಂದೆ ಹೋಗುತ್ತಿದ್ದಾರೆ. ಅವರಲ್ಲಿ ಓದು ಮತ್ತು ಅಧ್ಯಯನದ ಕೊರತೆ ಕಂಡುಬರುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದೆ ನಮ್ಮ ಭಾಗದ ಹುಡುಗರ ಹೆಸರುಗಳಿರುತಿದ್ದವು ಆದರೆ ಈಗ ಅದು ಕಡಿಮೆಯಾಗಿದೆ. ವಿದ್ಯಾವಂತರ ತಮ್ಮ ಮಕ್ಕಳು ಕಲೆ ಸಂಸ್ಕೃತಿಯತ್ತ ಒಲವು ತೋರುವಂತಹ ವಾತಾವರಣ ನಿರ್ಮಾಣ ಮಾಡಬೇಕೆಂದು ಹೇಳಿದರು.
ಯಾರೂ ಯಾರನ್ನೂ ಮೇಲೆತ್ತಲಾರರು:
ಪ್ರಸ್ತುತ ಜಗತ್ತಿನಲ್ಲಿ ಯಾರೂ ಯಾರನ್ನೂ ಮೇಲೆತ್ತುವುದಿಲ್ಲ. ಸ್ವಯಂ ಪ್ರಯತ್ನದಿಂದಲೇ ಸಾಧನೆ ಮಾಡಬೇಕಿದೆ. ಊರವರು ಜಾತಿಯವರು ನಮ್ಮನ್ನೆ ಬೆಳೆಸುತ್ತಾರೆ, ಸನ್ಮಾನಿಸುತ್ತಾರೆ ಎಂಬ ಭ್ರಮೆಯಿಂದ ನಾವು ಹೊರಬರಬೇಕಿದೆ. ಉತ್ತಮ ಶಿಕ್ಷಣದಿಂದ ಸಾಧನೆ ಮಾಡಿದರೆ, ನಮ್ಮ ಶ್ರಮವೇ ನಮಗೆ ಬೇಕಾದ ಗೌರವ ಮತ್ತು ಸಮ್ಮಾನಗಳನ್ನು ತಂದುಕೊಡುತ್ತದೆ. ಯಾವುದೇ ಕ್ಷೇತ್ರದಲ್ಲಿಯೇ ಇರಿ ಅಲ್ಲಿ ನಿಮ್ಮ ಶ್ರಮ ಹೆಚ್ಚಿದ್ದರೆ ಯಶಸ್ಸು ಖಂಡಿತಾ ಸಿಗುತ್ತದೆ.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ಆರ್.ಸುಜಾತ ಅವರು ಮಾತನಾಡಿ, ದೀವರ ಹೆಣ್ಣುಮಕ್ಕಳಲ್ಲಿ ಕಲಾಗುಣವಿದೆ. ಇದರು ಪರಂಪರೆಯಿಂದ ಬಂದುದಾಗಿದೆ. ಹಿಂದೆ ಪ್ರತಿ ಮನೆಯಲ್ಲಿ ಸೋಬಾನೆ ಹಾಡು ಮತ್ತು ಚಿತ್ತಾರ ಕಲಾವಿದರಿದ್ದರು. ಯುವ ಸಮೂಹದಲ್ಲಿ ಅದರ ಕೊರತೆ ಇದೆ. ಈ ಸಮುದಾಯದ ಆಹಾರ ಸಂಸ್ಕೃತಿಯೂ ವಿಶಿಷ್ಟ ಮತ್ತು ವಿಭಿನ್ನ. ಆದಿಮ ಕಲೆ ಉಳಿಸುವ ನಿಟ್ಟಿನಲ್ಲಿ ಧೀರ ದೀವರ ಬಳಗದವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು. ಕೆರೆಬೇಟೆ ಖ್ಯಾತಿಯ ಸಿನೆಮಾ ನಿರ್ದೇಶಕ ರಾಜ್‌ಗುರು ಅವರು ಸಮಾರೋಪ ಭಾಷಣ ಮಾಡಿದರು.
‘ಸಮುದಾಯದವರು ಕೂಡಿ ಧೀರ ದೀವರು ಪುರಸ್ಕಾರ ನೀಡುತ್ತಿರುವುದು ಖುಷಿ ಕೊಟ್ಟಿದೆ. ಹಿರಿಯರನ್ನು ಗುರುತಿಸಿ ಗೌರವಿಸುವುದು ನಮ್ಮ ಸಂಪ್ರದಾಯ, ನಮ್ಮವರ ಸಾಧನೆಯನ್ನು ತಿಳಿಸಿದರೆ ಮಾತ್ರ ಎಳೆಯ ಪೀಳಿಗೆಗೆ ಅರಿವಾಗುತ್ತದೆ. ಹೋರಾಟಗಾರರು, ಕಲಾವಿದರನ್ನು ಗೌರವಿಸುವುದು ಉತ್ತಮ ಸಂಪ್ರದಾಯ ಈ ಕಾರಣಕ್ಕೆ ಆಯೋಜಕರನ್ನು ಅಭಿನಂದಿಸುತ್ತೇನೆ’.
-ಲಕ್ಷ್ಮಣಕೊಡಸೆ, ಹಿರಿಯ ಪತ್ರಕರ್ತ ಮತ್ತು ಸಾಹಿತಿ
ವೇದಿಕೆಯಲ್ಲಿ ಸಿಗಂದೂರು ಚೌಡಮ್ಮ ದೇವಾಲಯ ಕಾರ್ಯದರ್ಶಿ ಹೆಚ್.ಆರ್.ರವಿಕುಮಾರ್, ಜಿಲ್ಲಾ ಆರ್ಯಈಡಿಗರ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಧೀರ ದೀವರ ಬಳಗದ ಸಂಚಾಲಕ ಸುರೇಶ್ ಕೆ ಬಾಳೆಗುಂಡಿ, ಈಡೂರು ಶ್ರೀಧರ್ ಉಪಸ್ಥಿತರಿದ್ದರು. ಸಾಂಸ್ಕೃತಿಕ ವೈಭವ ಸಂಚಾಲಕ ನಾಗರಾಜ್ ನೇರಿಗೆ ಅಧ್ಯಕ್ಷತೆ ವಹಿಸಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಕತ್ರ ಹರ್ಷಕುಗ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಎಡಿಸಿ ಕೆ.ಹೆಚ್.ಶಿವಕುಮಾರ್ ಸ್ವಾಗತಿಸಿದರು. ಕಲ್ಪತರು ಮೋಹನ್, ಡಾ.ಶಶಿಕುಮಾರ್ ಕಾಸರಗುಪ್ಪೆ, ನವೀನ್ ಪುರದಾಳು, ಶ್ವೇತಾ ಬಂಡಿ ಸಂಧ್ಯಾ ಎಸ್, ಸನ್ಮಾನ ಪತ್ರ ವಾಚಿಸಿದರು. ಡಾ.ಮೋಹನ್ ಚಂದ್ರಗುತ್ತಿ, ಡಾ.ನಾಗೇಶ್ ಬಿದರಗೋಡು, ಡಾ.ಜ್ಞಾನೇಶ್, ನಿವೃತ್ತ ಬಿಇಒ ಎಂ.ನಾಗರಾಜ್, ಮೆಗ್ಗಾನ್ ಆಸ್ಪತ್ರೆ ಅಧಿಕ್ಷಕ ಡಾ.ತಿಮ್ಮಪ್ಪ, ಸಮುದಾಯದ ಅಧಿಕಾರಿಗಳಾದ ಹೊಳಿಯಪ್ಪ, ಹೊಸನಗರ ಬಿಇಒ ಕೃಷ್ಣಮೂರ್ತಿ, ಟಾಕಪ್ಪ ಕಣ್ಣೂರು, ಮಧುಗಣಪತಿ ಮಡೆನೂರು, ಜಿ.ಡಿ.ಮಂಜುನಾಥ್, ತಬಲಿ ಬಂಗಾರಪ್ಪ, ಹುಬ್ಬಳ್ಳಿ ಈಡಿಗ ಸಂಘದ ಡಿ.ಬಿ.ಸಾಗರ್, ಬಿಲ್ಲವ ಸಂಘದ ಅಧ್ಯಕ್ಷ ಭುಜಂಗಯ್ಯ, ಡಾ.ಹೆಚ್.ನಾಗರಾಜ್, ರವೀಂದ್ರ ಕೆ.ಎಂ., ತೇಕಲೆ ರಾಜಪ್ಪ, ಉದಯಕುಮಾರ್, ಗಜೇಂದ್ರ, ಓಂಕಾರ್ ಕಾಗರಸೆ, ಡಾ.ಪ್ರವೀಣ್, ವೀಣಾ ವೆಂಕಟೇಶ್, ಪುಷ್ಪಾ ಮೂರ್ತಿ, ಮಾನಸ ಹೆಬ್ಬೂರು, ಕೇಶವಮೂರ್ತಿ, ಬ್ಲೂಮನ್ ಮಹೇಶ್, ಕಲಗೋಡು ರಾಮಕೃಷ್ಣ, ಜಯದೇವಪ್ಪ, ಮುಡುಬ ರಾಘವೇಂದ್ರ, ಹೊದಲ ಶಿವು, ಮೋಹನ್ ಸಿಂಧುವಾಡಿ, ವಕೀಲ ಉಮೇಶ್ ಕೆ.ಎಲ್. ಸಮಾಜದ ವಿವಿಧ ಅಧಿಕಾರಿಗಳು ಸೇರಿದಂತೆ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಡಾ.ಅನ್ನಪೂರ್ಣ, ಜಿ.ಕೆ.ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಹಿಳ್ಳೋಡಿ ಕೃಷ್ಣ ಮೂರ್ತಿ ವಂದನಾರ್ಪಣೆ ಮಾಡಿದರು.