ಬೆಳಗಾವಿ: ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಸ್ವಸ್ಥಗೊಂಡ ಅತಿಥಿ ಉಪನ್ಯಾಸಕಿಗೆ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಬೆಳಗಾವಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಎಂಎಲ್ಸಿ ಡಾ.ಧನಂಜಯ ಸರ್ಜಿ ಅವರು ಕರ್ತವ್ಯ ಪ್ರಜ್ಞೆಯ ಜೊತೆಗೆ ಮಾನವೀಯತೆ ಮರೆದಿದ್ದಾರೆ.
ಬೆಳಗಾವಿಯಲ್ಲಿ ವಿಧಾನ ಪರಿಷತ್ ಅಧಿವೇಶನ ನಡೆಯುತ್ತಿದ್ದು, ಸುವರ್ಣಸೌಧದ ಮುಂಭಾಗ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮನವಿ ಸ್ವೀಕರಿಸಿ, ಅತಿಥಿ ಉಪನ್ಯಾಸಕರ ಗೌರವ ಧನವನ್ನು ಹೆಚ್ಚಳ ಮಾಡುವಂತೆ ಈಗಾಗಲೇ ಅಧಿವೇಶನದಲ್ಲಿ ಚರ್ಚೆ ಮಾಡಲಾಗಿದೆ. ಈ ಸಂಬಂಧ ಸಚಿವರ ಜೊತೆ ಸಭೆ ಕೂಡ ನಡೆಸಲಾಗಿದೆ. ಸಚಿವರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಅತಿಥಿ ಉಪನ್ಯಾಸಕಿಯೊಬ್ಬರು ದಿಢೀರನೇ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದು, ತಕ್ಷಣ ಕಾರ್ಯ ಪ್ರವೃತ್ತರಾದ ಡಾ.ಧನಂಜಯ ಸರ್ಜಿ ಅವರು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಖುದ್ದು ತಾವೇ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಶಾಸಕರ ಈ ಕಾರ್ಯಕ್ಕೆ ಅತಿಥಿ ಉಪನ್ಯಾಸಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.