ಶಿವಮೊಗ್ಗ : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಜಗದೀಶ್ ಅಲಿಯಾಸ್ ಜಗ್ಗು ಬುಧವಾರ ಸಂಜೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡಿದ್ದಾನೆ.
ಹೈಕೋರ್ಟ್ ಜಾಮೀನು ಮಂಜೂರು ನಂತರವೂ ಶ್ಯೂರಿಟಿ ಸಿಗುವುದು ವಿಳಂಬವಾದ ಹಿನ್ನೆಲೆ ಒಂದು ದಿನ ತಡವಾಗಿ ಜೈಲಿನಿಂದ ಹೊರಬಂದಿದ್ದಾನೆ. ಆತನನ್ನು ಕರೆದೊಯ್ಯಲು ಕುಟುಂಬದವರು ಜೈಲು ಬಳಿ ಆಗಮಿಸಿದ್ದು, ಅವರ ಜೊತೆಗೆ ತೆರಳಿದ್ದಾನೆ.
ಜಗದೀಶ್ ಚಿತ್ರದುರ್ಗದಲ್ಲಿ ಆಟೋ ಚಾಲಕನಾಗಿದ್ದ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ಯುವ ತಂಡದಲ್ಲಿದ್ದ ಜಗದೀಶ್ 6 ನೇ ಆರೋಪಿಯಾಗಿದ್ದ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ಆರೋಪದ ಹಿನ್ನೆಲೆ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾಯಿಸಲಾಗಿತ್ತು. ಆಗಸ್ಟ್ 29 ರಂದು ಆರೋಪಿಗಳಾದ ಜಗದೀಶ್ ಮತ್ತು ಲಕ್ಷಣ್ ರನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ನ್ಯಾಯಾಲಯ ಜಾಮೀನು ಪ್ರಕಟಿಸಿದ ಹಿನ್ನೆಲೆ ಮಂಗಳವಾರ ಲಕ್ಷಣ್ ಬಿಡುಗಡೆಯಾಗಿದ್ದ. ಇದೀಗ ಶ್ಯೂರಿಟಿ ಸಿಕ್ಕ ಹಿನ್ನೆಲೆಯಲ್ಲಿ ಜಗದೀಶ್ ಕೂಡ ಬಿಡುಗಡೆಯಾಗಿದ್ದಾನೆ.