ಶಿವಮೊಗ್ಗ : ಬಿಜೆಪಿ ಸಂಸದರ ಮೇಲೆ ಹಲ್ಲೆ ಮಾಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ, ಶಿವಮೊಗ್ಗ ಬಿಜೆಪಿ ಯುವ ಮೋರ್ಚಾ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಲುವಾಗಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಮೋರ್ಚಾ ಕಾರ್ಯಕರ್ತರನ್ನ, ಜಯನಗರ ಪೊಲೀಸರು ಮಹಾವೀರ ವೃತ್ತದಲ್ಲೇ ತಡೆದು, ನಿಲ್ಲಿಸಿದರು.
ಈ ವೇಳೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಕೇಂದ್ರ ಸಚಿವ ಅಮಿತ್ ಶಾ ಪರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರಾಹುಲ್ ಗಾಂಧಿಯವರು ಬಲವಂತವಾಗಿ ಬಿಜೆಪಿ ಸಂಸದರನ್ನು ತಳ್ಳಿದ್ದಾರೆ. ಈ ವೇಳೆ ಸಂಸದರಾದ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಂಡಿದ್ದಾರೆ. ರಾಹುಲ್ ಗಾಂಧಿಯವರ ಈ ನಡೆ ಖಂಡನೀಯ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗುಂಡಾ ರಾಹುಲ್ ಗಾಂಧಿ ಎಂದು ಘೋಷಣೆ ಕೂಗಿದ ಯುವ ಮೋರ್ಚಾ ಕಾರ್ಯಕರ್ತರು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಬಳಿಕ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಹೊರಡುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು, ಕರೆದೊಯ್ದರು.
ಈ ಸಂದರ್ಭದಲ್ಲಿ ಯುವ ಮೋರ್ಚಾದ ರಾಜು, ದರ್ಶನ್, ಸುರೇಖಾ ಮುರಳೀಧರ್, ರಶ್ಮಿ ಸೇರಿದಂತೆ ಪ್ರಮುಖರಿದ್ದರು.