ಶಿವಮೊಗ್ಗ : ನಗರ ಹೊರವಲಯದ ಕಲ್ಲೂರು-ಮಂಡ್ಲಿ ಸಮೀಪದ ತುಂಗಾ ಚಾನಲ್ ನಲ್ಲಿ ಈಜಲು ತೆರಳಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ಹಳೇ ಮಂಡ್ಲಿ ನಿವಾಸಿ ಮೋಹಿತ್(15) ಮೃತ ಬಾಲಕ.
ಕ್ರಿಸ್ಮಸ್ ಪ್ರಯುಕ್ತ ಶಾಲೆಗಳಿಗೆ ರಜೆ ಇದ್ದ ಕಾರಣ ಸ್ನೇಹಿತರೊಂದಿಗೆ ಈಜಾಡಲು ತೆರಳಿದ್ದ ವೇಳೆ ಮೋಹಿತ್ ನೀರು ಪಾಲಾಗಿದ್ದ. ಈತನ ಜೊತೆ ಹೋಗಿದ್ದ ಸ್ನೇಹಿತರು ಭಯದಿಂದ ಯಾರಿಗೂ ಹೇಳದೆ ಮನೆಗೆ ಹೋಗಿದ್ದರು. ಸಂಜೆಯಾದರೂ ಮನೆಗೆ ಬಾರದ ಮಗನಿಗೆ ಪಾಲಕರು ಹುಡುಕಾಟ ನಡೆಸಿದ್ದರು.
ಆತನ ಸ್ನೇಹಿತರನ್ನು ವಿಚಾರಿಸಿದಾಗ ಚಾನಲ್ ಗೆ ಇಳಿದಿರುವ ಸಂಗತಿ ಬಾಯ್ಬಿಟ್ಟಿದ್ದರು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಹುಡುಕಾಟ ನಡೆಸಿದರೂ ಮೋಹಿತ್ ಪತ್ತೆಯಾಗಿರಲಿಲ್ಲ. ಗುರುವಾರ ಬೆಳಿಗ್ಗೆಯಿಂದ ನಿರಂತರ ಕಾರ್ಯಾಚರಣೆ ಬಳಿಕ ಸಂಜೆ ವೇಳೆಗೆ ಮೋಹಿತ್ ಶವ ಪತ್ತೆಯಾಗಿದೆ.
ಮೋಹಿತ್ ಶಿವಮೊಗ್ಗದ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ. ತಂದೆ ಶಿವಮೊಗ್ಗದಲ್ಲಿ ವಕೀಲರಾಗಿದ್ದಾರೆ ಎನ್ನಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.