ಶಿವಮೊಗ್ಗ : ನಿವೃತ್ತ ಕೆಎಎಸ್ ಅಧಿಕಾರಿ, ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಜೆಡಿಎಸ್ ನಿಂದ ಸ್ಫರ್ಧಿಸಿ, ಪರಾಭವಗೊಂಡಿದ್ದ ಹೆಚ್.ಟಿ.ಬಳೆಗಾರ್(62) ಅವರ ಅಂತ್ಯಸಂಸ್ಕಾರ ಹುಟ್ಟೂರಿನಲ್ಲಿ ನೆರವೇರಿತು.
ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಟ್ಟಿಕೋಟೆ ಗ್ರಾಮದಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದ ಬಳಿಕ ಬಳೆಗಾರ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಶಿಕಾರಿಪುರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಬೆಂಗಳೂರಿನಿಂದ ಆಗಮಿಸಿ, ಬಳೆಗಾರ್ ಅವರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಇತ್ತೀಚೆಗಷ್ಟೇ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಳೆಗಾರ್ ಅವರು, ಬೆಂಗಳೂರಿನ ರಾಮಮೂರ್ತಿ ನಗರದಲ್ಲಿದ್ದರು. ಮತ್ತೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಹೋಗಿದ್ದ ವೇಳೆ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಬಳೆಗಾರ್ ಮೃತಪಟ್ಟಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
ನಿವೃತ್ತಿ ಘೋಷಿಸಿ, ರಾಜಕೀಯಕ್ಕೆ ಎಂಟ್ರಿಯಾಗಿದ್ದ ಬಳೆಗಾರ್:
ಕೆಎಎಸ್ ಅಧಿಕಾರಿಯಾಗಿದ್ದ ಬಳೆಗಾರ್ ಅವರು ಸೇವೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡು, ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು. ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಆಪ್ತರಾಗಿದ್ದ ಬಳೆಗಾರ್ ಕಾಂಗ್ರೆಸ್, ಜೆಡಿಎಸ್ ನಲ್ಲಿ ಸಕ್ರೀಯವಾಗಿದ್ದರು. ಶಿಕಾರಿಪುರ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಎರಡು ಬಾರಿ ಜೆಡಿಎಸ್ ನಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. ನಂತರ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರೂ ಆಗಿದ್ದರು. ಅಲ್ಲದೇ ಏತ ನೀರಾವರಿ ಯೋಜನೆಗೆ ಆಗ್ರಹಿಸಿ, ಸಾಕಷ್ಟು ಹೋರಾಟ ಕೂಡ ನಡೆಸಿದ್ದರು.