ಶಿವಮೊಗ್ಗ: ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನು ರೈತನೋರ್ವ ಶಿವಮೊಗ್ಗದಿಂದ ಗೋವಾಗೆ ವಿಮಾನದಲ್ಲಿ ಮೂರು ದಿನದ ಪ್ರವಾಸಕ್ಕೆ ಕರೆದೊಯ್ದಿದ್ದಾರೆ.
ಕೂಲಿ ಕಾರ್ಮಿಕರ ಆಸೆಯನ್ನ ಈಡೇರಿಸುವ ಸಲುವಾಗಿ ರೈತ ವಿಶ್ವನಾಥ್, ಶಿವಮೊಗ್ಗ ಏರ್ಪೋರ್ಟ್ ನಿಂದ 11 ಜನ ಕೂಲಿ ಕಾರ್ಮಿಕರನ್ನ ಇಂದು ಗೋವಾಕ್ಕೆ ಕರೆದೊಯ್ದಿದ್ದಾರೆ.
”ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಫೋಟೋ ತೆಗೆಸಿಕೊಂಡು ಸಂಭ್ರಮಿಸಿರುವ ಕೂಲಿ ಕಾರ್ಮಿಕ ಮಹಿಳೆಯರು, ಫ್ಲೈಟ್ ಜರ್ನಿಯನ್ನ ಸಕತ್ ಎಂಜಾಯ್ ಮಾಡಿರುವುದು ನಿಜಕ್ಕೂ ವಿಶೇಷ.”
ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಶಿರಗನಹಳ್ಳಿ ಗ್ರಾಮದ ರೈತ ವಿಶ್ವನಾಥ್, ಕೃಷಿಕರಾಗಿದ್ದು ಆಗಾಗ್ಗೆ ಕೆಲಸದ ನಿಮಿತ್ತ ವಿಮಾನದಲ್ಲಿ ಓಡಾಟ ಮಾಡುತ್ತಿದ್ದರು.ಇದನ್ನ ತಿಳಿದಿದ್ದ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ ಕಾರ್ಮಿಕ ಮಹಿಳೆಯರು, ತಾವು ವಿಮಾನದಲ್ಲಿ ಸಂಚಾರ ಮಾಡುವ ಆಸೆಯನ್ನು ಹೊರಹಾಕಿದ್ದರು. ಅವರ ಆಸೆಯನ್ನು ಈಡೇರಿಸುವ ಸಲುವಾಗಿ ರೈತ ವಿಶ್ವನಾಥ್, ಇಂದು ಎಲ್ಲರನ್ನು ವಿಮಾನದಲ್ಲಿ ಗೋವಾಗೆ ಕರೆದೊಯ್ದಿದ್ದಾರೆ.
ಇನ್ನು ವಿಶ್ವನಾಥ್ ತಮ್ಮ ಅಡಿಕೆ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ 12 ಜನ ಕೂಲಿ ಕಾರ್ಮಿಕ ಮಹಿಳೆಯರನ್ನ ತಿರುಪತಿಗೆ ಕರೆದೊಯಲು ನಿರ್ಧರಿಸಿದ್ದರು. ಆದರೇ, ಫ್ಲೈಟ್ ಟಿಕೆಟ್ ಸಿಗದ ಕಾರಣ ಗೋವಾ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರು. ಕೊನೆ ಕ್ಷಣದಲ್ಲಿ ಕೌಟುಂಬಿಕ ಕಾರಣಕ್ಕ ಒಬ್ಬರು ಟ್ರಿಪ್ ನಿಂದ ಮಿಸ್ ಆಗಿದ್ದು, 11 ಜನರು ಗೋವಾಗೆ ತೆರಳಿದ್ದಾರೆ.
ಇಂದು 11 ಜನ ಕೂಲಿ ಕಾರ್ಮಿಕ ಮಹಿಳೆಯರ ಜೊತೆಗೆ ಗೋವಾಗೆ ತೆರಳಿದ್ದು, ಫೆಬ್ರವರಿ 20 ರಂದು ಶಿವಮೊಗ್ಗಕ್ಕೆ ವಿಮಾನದ ಮೂಲಕ ವಾಪಸ್ ಬಂದು, ನಂತರ ವಿಜಯನಗರಕ್ಕೆ ಹಿಂದುರುಗಲಿದ್ದೇವೆ ಎಂದು ರೈತ ವಿಶ್ವನಾಥ್ ಮಾಹಿತಿ ನೀಡಿದ್ದಾರೆ.