Malenadu Mitra
ಶಿವಮೊಗ್ಗ

ಬ್ರಹ್ಮಶ್ರೀ ನಾರಾಯಣ ಗುರು ಸೊಸೈಟಿ ಬಲವರ್ಧನೆ: ನೂತನ ಅಧ್ಯಕ್ಷ ಡಾ.ಜಿ.ಡಿ.ನಾರಾಯಣಪ್ಪ ಭರವಸೆ



ಶಿವಮೊಗ್ಗ: ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘಕ್ಕೆ ನೂತನ ಆಡಳಿತ ಮಂಡಳಿ ರಚನೆಯಾಗಿದೆ. ಜಿಲ್ಲೆಯಲ್ಲಿ ಪ್ರಭಾವಿ ಸಮುದಾಯವನ್ನು ಪ್ರತಿನಿಧಿಸುವ ಈ ಸೊಸೈಟಿಯ ಪ್ರಗತಿಗೆ ಆಡಳಿತ ಮಂಡಳಿ ಶ್ರಮಿಸಲಿದೆ ಎಂದು ಮಾಜಿ ಶಾಸಕರೂ ಆದ ಸಹಕಾರ ಸಂಘದ ನೂತನ ಅಧ್ಯಕ್ಷ ಡಾ.ಜಿ.ಡಿ.ನಾರಾಯಣಪ್ಪ ಹೇಳಿದರು.
ಶನಿವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘದಲ್ಲಿ 17 ಜನ ನಿರ್ದೇಶಕರಿದ್ದು, ತಮ್ಮನ್ನು ಅಧ್ಯಕ್ಷರಾಗಿ ಹಾಗೂ ಕಲಗೋಡು ರಾಮಕೃಷ್ಣ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಎಲ್ಲಾ ನಿರ್ದೇಶಕರು ಮತ್ತು ಷೇರುದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ. ಸಹಕಾರಿ ಕಾಯ್ದೆ ಅನುಸಾರ ಚುನಾವಣೆ ನಡೆದಿದ್ದು, ನಮ್ಮ ತಂಡ ಅಧಿಕಾರಕ್ಕೆ ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸಹಜ ಆದರೆ ಈಗ ಎಲ್ಲಾ ನಿರ್ದೇಶರೂ ಸೇರಿ ಸಹಕಾರ ಸಂಘದ ಅಭ್ಯುದಯಕ್ಕೆ ಶ್ರಮಿಸುತ್ತೇವೆ. ಆರ್ಥಿಕವಾಗಿ ದುರ್ಬಲರಾದ ಸಮುದಾಯದ ಪ್ರತಿಯೊಬ್ಬರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರ ಸಂಸ್ಥೆ ಬೆಳೆಸಬೇಕಿದೆ. ಇದಕ್ಕೆ ಎಲ್ಲಾ ಷೇರುದಾರರ ಬೆಂಬಲ ಅಗತ್ಯವಾಗಿ ಬೇಕಾಗಿದೆ ಎಂದು ನಾರಾಯಣಪ್ಪ ಹೇಳಿದರು.
ಸೊಸೈಟಿಯಲ್ಲಿ ಈಗ  ಗರಿಷ್ಠ 25 ಸಾವಿರ ಸಾಲ ನೀಡುತ್ತಿದ್ದು, ಇದನ್ನು ಹೆಚ್ಚಿಸಬೇಕೆಂಬ ಒತ್ತಡ ಷೇರುದಾರರ ಕಡೆಯಿಂದ ಬಂದಿದೆ. ಆಡಳಿತ ಮಂಡಳಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ. ದೊಡ್ಡ ಸಮಾಜ ಏಳು ಸಾವಿರಕ್ಕೂ ಹೆಚು ಷೇರುದಾರರಿದ್ದಾರೆ. ಗ್ರಾಮೀಣ ಭಾಗದವರೇ ಹೆಚ್ಚಿರುವ ಕಾರಣ ವಹಿವಾಟು ನಡೆಸುವುದು ವಿರಳವಾಗಿದೆ. ಆದರೆ ನೂತನ ಆಡಳಿತ ಮಂಡಳಿಯಲ್ಲಿ ಹೆಚ್ಚಿನ ನಿರ್ದೇಶಕರು ಯುವಕರಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಪ್ರವಾಸ ಮಾಡಿ ಸೊಸೈಟಿ ಬಲವರ್ಧನೆಗೆ ಸಹಕರಿಸುವುದಾಗಿ ಹೇಳಿದರು.
ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಕೆ.ಎಂ.ರವೀಂದ್ರ ಅವರು ಮಾತನಾಡಿ, ವಾರ್ಷಿಕ 45 ಕೋಟಿ ವಹಿವಾಟು ನಡೆಸುವ ಸೊಸೈಟಿಯನ್ನು ನೂತನ ಆಡಳಿತ ಮಂಡಳಿ ಇನ್ನಷ್ಟ ಬಲಿಷ್ಠಗೊಳಿಸಲಿ ಎಂದು ಹಾರೈಸಿದರು. ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷ ಕಲಗೋಡು ರಾಮಕೃಷ್ಣ, ನಿರ್ದೇಶಕರಾದ ಹೆಬ್ಬೂರು ನಾಗರಾಜ್‌, ಮೂಲಾ ಗಿರೀಶ್‌, ಕೆರೆಹಳ್ಳಿ ರಾಮಪ್ಪ, ಇಂದೂಧರ, ನಿರಂಜನ್‌, ಶೋಭಾ ಪುರುಷೋತ್ತಮ್‌, ಮಮತಾ ಯೋಗೇಶ್‌ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

ಯಾವುದೇ ಹಣಕಾಸು ಸಂಸ್ಥೆ ಬೆಳೆಯಬೇಕೆಂದರೆ ಸದಸ್ಯರು ಪಡೆದ ಸಾಲವನ್ನು ನಿಯಮಿತವಾಗಿ ಮರುಪಾವತಿ ಮಾಡಬೇಕಿದೆ. ಷೇರುದಾರರಿಗೆ ನಮ್ಮ ಸೊಸೈಟಿ ಎಂಬ ಭಾವನೆ ಇರಬೇಕು. ಬದಲಾದ ಸಹಕಾರಿ ಕಾಯ್ದೆಯ ನಿಯಮಗಳನ್ನು ಷೇರುದಾರರಿಗೆ ತಿಳಿಸುವ ಕೆಲಸವೂ ಆಗಬೇಕಿದೆ. ಸೊಸೈಟಿಯ ಸಿಬ್ಬಂದಿ ಹಾಗೂ ನಿರ್ದೇಶಕ ಮಂಡಳಿ ಈ ನೆಲೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಲಿದೆ.


ಡಾ.ಜಿ.ಡಿ.ನಾರಾಯಣಪ್ಪ, ಅಧ್ಯಕ್ಷರು. ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘ 

Ad Widget

Related posts

ಯತ್ನಾಳ್ ಗಿಣಿ ಶಾಸ್ತ್ರಕ್ಕೆ ಅವರ ಪಕ್ಷದಲ್ಲೇ ಮನ್ನಣೆ ಇಲ್ಲ : ಶಿಕ್ಷಣ ಸಚಿವ ಮಧು ಬಂಗಾರಪ್ಪ ವ್ಯಂಗ್ಯ

Malenadu Mirror Desk

ಕೊರೊನ: 19 ಸಾವು, 884 ಮಂದಿ ಡಿಸ್ಚಾರ್ಜ್

Malenadu Mirror Desk

ಜಿಂಕೆ ಬೇಟೆ ಮೂವರ ಬಂಧನ

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.