Malenadu Mitra
ರಾಜ್ಯ ಶಿವಮೊಗ್ಗ

ಬಜರಂಗಳದಳ ಕಾರ್ಯಕರ್ತ ಹರ್ಷ ಹತ್ಯೆ ನಂತರ ನಡೆದ ಗಲಭೆ, ಕಲ್ಲು ತೂರಾಟ ಪ್ರಕರಣ, ಸಚಿವ ಈಶ್ವರಪ್ಪರನ್ನು ಮೊದಲ ಆರೋಪಿ ಮಾಡಲು ಕಾಂಗ್ರೆಸ್ ಆಗ್ರಹ

ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಮೆರವಣಿಗೆಯ ನೇತೃತ್ವ ವಹಿಸಿದ್ದ ಸಚಿವ ಕೆ.ಎಸ್ ಈಶ್ವರಪ್ಪ, ಬಿ.ವೈ. ರಾಘವೇಂದ್ರ, ಪಾಲಿಕೆ ಸದಸ್ಯ ಚನ್ನಬಸಪ್ಪ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ್ಷನ ಶವಯಾತ್ರೆ ಸಂದರ್ಭದಲ್ಲಿ ಗಲಾಟೆ ದೊಂಬಿ ಈಶ್ವರಪ್ಪ, ಬಿ.ವೈ. ರಾಘವೇಂದ್ರ, ಚನ್ನಬಸಪ್ಪ ಮುಂತಾದ ನಾಯಕರು ಮೆರವಣಿಗೆ ನೇತೃತ್ವವನ್ನು ವಹಿಸಿದ್ದರಿಂದಲೇ ಆಗಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಮೆರವಣಿಗೆಯಲ್ಲಿ ಭಾಗಿಯಾದ ಇವರೆಲ್ಲರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಳ್ಳಬೇಕು. ಈಶ್ವರಪ್ಪ ಅವರನ್ನೇ ಮೊದಲ ಆರೋಪಿಯನ್ನಾಗಿ ಮಾಡಬೇಕು. ಮತ್ತು ಅವರ ಜೇಬಿನಿಂದಲೇ ಆಸ್ತಿ, ಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.

ಹೆಣ ಮುಂದಿಟ್ಟುಕೊಂಡು ರಾಜಕಾರಣ ಮಾಡುವ ವೋಟಿಗಾಗಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಬಿಜೆಪಿಯವರು ಮನುಷ್ಯರೇ ಎಂದು ಪ್ರಶ್ನಿಸಿದ ಅವರು, ಬಡ ಹುಡುಗನೊಬ್ಬ ಬಲಿಯಾಗಿದ್ದಾನೆ. ಆತನ ಬಲಿಯನ್ನೇ ವರದಾನವನ್ನಾಗಿ ಮಾಡಿಕೊಂಡಿರುವ ಬಿಜೆಪಿಯವರು ಸಂಪೂರ್ಣ ರಾಜಕಾರಣದಲ್ಲಿ ತೊಡಗಿದ್ದಾರೆ. ಹರ್ಷನ ಸಾವಿನ ಬಗ್ಗೆ ನಮಗೂ ಅನುಕಂಪವಿದೆ. ಅವನ ಹತ್ಯೆ ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ನಮ್ಮ ಪಕ್ಷದ ನಾಯಕರೂ ಅದನ್ನೇ ಹೇಳಿದ್ದಾರೆ. ಪ್ರಕರಣದ ನ್ಯಾಯಾಂಗ ತನಿಖೆಯಾಗಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದು ನಮ್ಮ ಒತ್ತಾಯ ಆಗಿದೆ ಎಂದರು.
ಆದರೆ, ಬಿಜೆಪಿ ನಾಯಕರು ಸಚಿವ ಕೆ.ಎಸ್. ಈಶ್ವರಪ್ಪನವರ ಮಾತು ಕೇಳುತ್ತಾ ಕೇಸ್ ಗಳನ್ನು ಹಾಕಿಸಿಕೊಂಡಿದ್ದ ಹರ್ಷನನ್ನು ಬೆಳಗು ಹರಿಯುವುದರೊಳಗೆ ರಾಷ್ಟ್ರೀಯ ನಾಯಕನನ್ನಾಗಿ ಮಾಡಿ ಅದನ್ನು ಚುನಾವಣೆಗೆ, ವೋಟಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದರು.

ಉತ್ತರ ಪ್ರದೇಶದ ಚುನಾವಣೆಗೆ ಬಳಕೆ

ಈ ಹಿಂದೆ ಹಿಂದೂ ಯುವಕರು ಕೊಲೆಯಾಗಿದ್ದಾರೆ. ಶಿವಮೊಗ್ಗದಲ್ಲಿಯೇ ಗೋಕುಲ್, ವಿಶ್ವನಾಥ್ ಶೆಟ್ಟಿ, ಜೀವನ್ ಸೇರಿದಂತೆ ಅನೇಕ ಯುವಕರ ಕೊಲೆಗಳಾಗಿವೆ. ಬಿಜೆಪಿಯವರೇ ಹೇಳುವಂತೆ ರಾಜ್ಯದಲ್ಲಿ ಸುಮಾರು 37 ಜನ ಹಿಂದೂ ಯುವಕರು, ಮುಖಂಡರು ಹತ್ಯೆಯಾಗಿದ್ದಾರೆ. ಆದರೆ, ಎಲ್ಲಿಯೂ ಬಿಜೆಪಿಯವರು ಸಾಂತ್ವನ ಹೇಳಲಿಲ್ಲ. ಹಣದ ನೆರವು ನೀಡಲಿಲ್ಲ. ವೀರಾವೇಶ ಮಾಡಲಿಲ್ಲ. ಈ ಘಟನೆಯನ್ನು ಮಾತ್ರ ಉತ್ತರ ಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಬಿಂಬಿಸಿದ್ದಾರೆ. ಪ್ರಧಾನಿ ಮೋದಿ ಚುನಾವಣಾ ಭಾಷಣ ಮಾಡುವ ಸಂದರ್ಭದಲ್ಲಿಯೇ ಶಿವಮೊಗ್ಗದ ಘಟನೆ ಹೇಳಿ ಹಿಂದೂಗಳ ಭಾವನೆ ಕೆಣಕಿದ್ದಾರೆ ಎಂದು ದೂರಿದರು.

ಹರ್ಷನಿಗೆ ಕೆಲಸ ಕೊಡಲಿಲ್ಲ ಈ ಬಿಜೆಪಿಯವರು

ಹತ್ಯೆಯಾದ ಹರ್ಷ ಬಜರಂಗದಳದ ಕಾರ್ಯಕರ್ತನೂ ಅಲ್ಲ, ಬಿಜೆಪಿಯ ಕಾರ್ಯಕರ್ತನೂ ಅಲ್ಲ. ಅವನ ವಿರುದ್ಧವೇ ಕೇಸ್ ದಾಖಲಾಗಿತ್ತು. ಆತ ಜೈಲಿನಲ್ಲಿದ್ದ. ಜೈಲಿನಲ್ಲಿಯೂ ಗ್ಯಾಂಗ್ ವಾರ್ ನಡೆಸಿದ್ದ. ಆತನ ತಾಯಿಯೇ ನನ್ನ ಮಗ ಬಜರಂಗದಳದಲ್ಲಿ ಇಲ್ಲ ಎಂದು ಹೇಳಿದ್ದರು. ಹರ್ಷ ಜೈಲಿನಿಂದ ಬಿಡುಗಡೆಯಾದಾಗ ಆ ಯುವಕನಿಗೆ ಯಾವುದೇ ಸಹಾಯವನ್ನು ಈ ಬಿಜೆಪಿಯವರು ಮಾಡಲಿಲ್ಲ. ಅವನ ಹೆಸರೇ ಇವರಿಗೆ ಗೊತ್ತಿರಲಿಲ್ಲ. ಹರ್ಷ ಮಹಾನಗರ ಪಾಲಿಕೆಯಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕಿದ್ದ. ಅವನಿಗೊಂದು ಕೆಲಸವನ್ನೂ ಕೊಡಿಸಲಿಲ್ಲ. ಬದುಕಿದ್ದಾಗ ಏನನ್ನೂ ವಿಚಾರಿಸದ ಬಿಜೆಪಿ ನಾಯಕರು ಹೆಣದ ಮುಂದೆ ರಾಜಕಾರಣ ಮಾಡಿದರು ಎಂದು ಕುಟುಕಿದರು.

ಇಡೀ ಪ್ರಕರಣದಲ್ಲಿ ಕರ್ಫ್ಯೂ ಮತ್ತು ನಿಷೇಧಾಜ್ಞೆ ಕಾರಣದಿಂದ ವ್ಯಾಪಾರಸ್ಥರು ಹೈರಾಣಾಗಿದ್ದಾರೆ. ಬೀದಿ ಬದಿ ವ್ಯಾಪಾರಿಗಳಂತೂ ಒಂದು ಹೊತ್ತಿನ ಊಟಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ. ಈ ಎಲ್ಲಾ ನಷ್ಟವನ್ನು ಬಿಜೆಪಿಯವರೇ ತುಂಬಿಕೊಡಬೇಕು. ಯಾವ ಕೋಮಿನವರೇ ಆಗಿರಲಿ, ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸಬೇಕು. ಆಸ್ತಿ, ಪಾಸ್ತಿ ಕಳೆದುಕೊಂಡವರಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಯಮುನಾ ರಂಗೇಗೌಡ, ಹೆಚ್.ಸಿ. ಯೋಗೀಶ್, ರೇಖಾ ರಂಗನಾಥ್, ಚಂದ್ರಭೂಪಾಲ್, ವಿಶ್ವನಾಥ್ ಕಾಶಿ, ನಾಗರಾಜ್, ಎನ್.ಡಿ. ಪ್ರವೀಣ್, ಚಂದನ್, ಚಂದ್ರಶೇಖರ್ ಮತ್ತಿತರರಿದ್ದರು.

ಪೊಲೀಸರು ಬಿಜೆಪಿ ನಾಯಕರ ಕೈಗೊಂಬೆಗಳಾಗಿ ವರ್ತಿಸಬಾರದು. ಕೂಡಲೇ ಮೆರವಣಿಗೆಯಲ್ಲಿ ಭಾಗಿಯಾದ ಬಿಜೆಪಿ ನಾಯಕರ ವಿರುದ್ಧ ಕೇಸ್ ದಾಖಲಿಸಿಕೊಳ್ಳಬೇಕು. ಇಲ್ಲದಿದ್ದರೆ ಮಾರ್ಚ್ ೬ ಅಥವಾ ೭ ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆಯನ್ನು ಕಾಂಗ್ರೆಸ್ ಹಮ್ಮಿಕೊಳ್ಳುತ್ತದೆ. ಈ ಪ್ರತಿಭಟನೆಯಲ್ಲಿ ರಾಜ್ಯದ ಮುಖಂಡರು ಭಾಗವಹಿಸುತ್ತಾರೆ

ಹೆಚ್.ಎಸ್. ಸುಂದರೇಶ್ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

Ad Widget

Related posts

ಈಡಿಗರ ಹಾಸ್ಟೆಲ್‌ಗೆ ಅನುದಾನ ನೀಡಲು ಸಿಎಂ ಗೆ ಮನವಿ

Malenadu Mirror Desk

ಜಾತಿಗಣತಿ ವರದಿ ಬಿಡುಗಡೆ ಮಾಡಲು ಪ್ರಭಾವಿಗಳು ಬಿಡಲಿಲ್ಲ:ಈಶ್ವರಪ್ಪ

Malenadu Mirror Desk

ಪ್ರತಿಬಾರಿ ಭೂಮಿ ಸಮಸ್ಯೆ ಚುನಾವಣೆ ವಿಷಯವಾಗುವುದಾದರೆ, ಇಷ್ಟು ಇವರು ಮಾಡಿದ್ದೇನು?,
ಪತ್ರಿಕಾ ಸಂವಾದದಲ್ಲಿ ಸಾಗರ ಎಎಪಿ ಅಭ್ಯರ್ಥಿ ದಿವಾಕರ್ ಪ್ರಶ್ನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.