ಶಿವಮೊಗ್ಗ : ಫಿಲ್ಟರ್ ಇದೆ ಆದರೆ ಅದರಲ್ಲಿ ಶುದ್ಧವಾದ ನೀರು ಬರುತ್ತಿಲ್ಲ, ಶೌಚಾಲಯ ಇದೆ, ಅದನ್ನು ಸ್ವಚ್ಚ ಮಾಡೋದಿಕ್ಕೆ ಯಾರು ಬರುತ್ತಿಲ್ಲ, ಅಡುಗೆ ಕೋಣೆ ಇದ್ದರೂ ಅಲ್ಲಿ ಸ್ವಚ್ಛತೆ ಮಾಯವಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಸಹ್ಯಾದ್ರಿ ಕಾಲೇಜು ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಎಂಬದು ಸಂಪೂರ್ಣ ಮಾಯವಾಗಿದೆ. ನೀರಿನ ಫಿಲ್ಟರ್ ಹಾಳಾಗಿದೆ. ಇದುವರೆಗೂ ಅದನ್ನು ದುರಸ್ತಿಗೊಳಿಸಿಲ್ಲ. ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಎಂಬುದು ಮಾಯವಾಗಿದೆ. ಶೌಚಾಲಯಗಳ ಸ್ಥಿತಿ ಹೇಳ ತೀರದಾಗಿದೆ ಎಂದು ಆಡಳಿತ ವ್ಯವಸ್ಥೆ ವಿರುದ್ದ ಕಿಡಿಕಾರಿದರು. ಕೂಡಲೇ ಇವುಗಳಬಗ್ಗೆ ಗಮನಹರಿಸಬೇಕೆಂದು ವಿದ್ಯಾರ್ಥಿನಿಯರು ಒತ್ತಾಯಿಸಿದರು.
ಪರೀಕ್ಷಾ ಸಮಯ ಹತ್ತಿರ ಬರುತ್ತಿದೆ.ಇಂತಹ ಸಮಯದಲ್ಲಿ ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಗಳು ಅವಶ್ಯಕವಾಗಿದೆ. ಇದನ್ನು ಪೂರೈಸುವ ನಿಟ್ಟಿನಲ್ಲಿ ತಾವುಗಳು ಗಮನಹರಿಸಬೇಕು ಎಂದು ಆಗ್ರಹಿಸಿ ಕಾಲೇಜು ಎದುರು ಪ್ರತಿಭಟನೆ ನಡೆಸಿ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.
ಒಂದೇ ರೂಂನಲ್ಲಿ 11 ಜನರಿದ್ದು ಓದಿಕೊಳ್ಳುವ ಇಕ್ಕಟ್ಟಿನ ಪರಿಸ್ಥಿತಿಯನ್ನು ಹೇಳಿಕೊಂಡ ಅವರು, ಒಂದು ಕೊಠಡಿಯಲ್ಲಿ 11 ಜನ ವಿದ್ಯಾರ್ಥಿನಿಯರು ಇರುವಂತೆ ಸೂಚಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಹಲವು ವಿದ್ಯಾರ್ಥಿನಿಯರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಇದಕ್ಕೆ ಕಾರಣ ಹಾಸ್ಟೆಲ್‌ನಲ್ಲಿರುವ ಸ್ವಚ್ಛತೆಯ ಕೊರತೆ ಕಾರಣವಾಗಿದೆ. ವಿದ್ಯಾರ್ಥಿನಿಯರು ಸಾವಿರಾರು ರೂ. ವೈದ್ಯಕೀಯ ವೆಚ್ಚವನ್ನು ಭರಿಸಿದ್ದಾರೆ. ಕೂಡಲೇ ಈ ಬಗ್ಗೆ ತಾವುಗಳು ಗಮನಹರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಗೆ ಎನ್‌ಎಸ್‌ಯುಐ,ಎಬಿವಿಪಿ ಸಹ ಬೆಂಬಲ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ರಮ್ಯ,ಆಶಾ,ಕವಿತಾ,ಮೇಘನ,ಭೂಮಿಕಾ,ಕೃತಿಕಾ,ಸಿಂಚನ,ಜ್ಯೋತಿ,ರಕ್ಷಿತಾ ಸೇರಿದಂತೆ ಹಲವರಿದ್ದರು.