ಭಾಷೆಗಳ ಬಗ್ಗೆ ಹೆಚ್ಚು ಸೂಕ್ಷ್ಮವಾಗಿ ಅಧ್ಯಯನವಾಗಬೇಕಿದೆ. ಅನ್ಯ ಭಾಷೆಗಳಿಂದ ಶೋಷಣಾ ಪ್ರವೃತ್ತಿಗೆ ತಡೆ ಬೀಳಬೇಕು ಎಂದು ಕವಿ, ನಾಟಕಕಾರ ಎಚ್. ಎಸ್. ಶಿವಪ್ರಕಾಶ್ ಹೇಳಿದರು.
ಶಿವಮೊಗ್ಗ ಪತ್ರಿಕಾಭವನದಲ್ಲಿ ಬುಧವಾರ ಸಂಜೆ ಅವರು ಭಾಷಾ ವಿದ್ವಾಂಸ, ಸಹ್ಯಾದ್ರಿ ಕಲಾ ಕಾಲೇಜಿನ ಪ್ರೊ. ಮೇಟಿ ಮಲ್ಲಿಕಾರ್ಜುನ ಅವರ ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪಶ್ಚಿಮೀಕರಣ ಮತ್ತು ಆಧುನೀಕರಣದಿಂದ ಇಂಗ್ಲೀಷೇತರ ಭಾಷೆಗಳು ಬಹುಭಾಷಿತವಾಗದೆ ಹಾಗೆ ಉಳಿದಿವೆ. ಆಂಗ್ಲ ಭಾಷಾ ವ್ಯಾಮೋಹ ಹೆಚ್ಚುತ್ತಿರುವುದರಿಂದ ಭಾಷೆಯ ಶೋಷಣಾ ಪ್ರವೃತ್ತಿಯೂ ಹೆಚ್ಚುತ್ತಿದೆ. ಇದು ಸಾಮಾಜಿಕ ಕ್ಷೆಭೆಗೆ ಕಾರಣವಾಗಬಹುದೆಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.
ಭಾಷೆಯ ಸಮಸ್ಯೆ ಜೊತೆ ಜಟಿಲತೆ ಬಗ್ಗೆಯೂ ನಿರಂತರ ಚಿಂತನೆ ನಡೆಯಬೇಕು. ಏಕಭಾಷೆಯು ಇಂದು ಬಹುಭಾಷಾ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದೆ. ಸಂಸ್ಕೃತ ಮಾತ್ರ ಏಕಭಾಷೆಯಾಗಿ ಉಳಿದಿದಿದೆ. ಆದರೆ ಗ್ರಾಮೀಣ ಭಾಷೆ ಮಾತ್ರ ಇನ್ನೂ ಸಶಕ್ತವಾಗಿ ಉಳಿದಿದೆ ಎಂದ ಅವರು, ವೈಜ್ಞಾನಿಕ ರೀತಿಯಲ್ಲಿ ಭಾಷಾ ಶಾಸ್ತ್ರದ ಬಗ್ಗೆ ಅಧ್ಯಯನ ನಡೆಯಬೇಕು. ಆಧುನಿಕ ಭಾಷಾ ಶಾಸ್ತ್ರವನ್ನು ಇತರೆ ಭಾಷೆಗಳ ಚೌಕಟ್ಟಿನಲ್ಲಿ ಅಧ್ಯಯನ ಮಾಡಬೇಕು ಎಂದರು.
ಚಿಂತನಾ ಸಂಸ್ಕೃತಿ ನಮ್ಮಲ್ಲಿ ಬೆಳೆಯಬೇಕು. ಪ್ರಾಚೀನ ವಿಷಯಗಳ ದರ್ಶನವಾಗಬೇಕು. ಜಗತ್ತಿನ ಎಲ್ಲಾ ಶೋಷಣೆಗಳ ಬಗ್ಗೆಯೂ ಬೆಳಕು ಚೆಲ್ಲಬೇಕು. ಭಾಷಾಶಾಸ್ತ್ರವು ಪ್ರಾಚೀನ ವಿಶಿಷ್ಟ ವ್ಯಾಕರಣದಿಂದ ಕೂಡಿರಬೇಕು ಎಂದು ಹೇಳದಿರು.
ಬಿಡುಗಡೆಯಾದ ಮಾತು ಮಾತು ಮಥಿಸಿ ಕೃತಿಯ ಬಗ್ಗೆ ಕವಿ ಮತ್ತು ನಾಟಕಕಾರ ಪ್ರೊ. ಕೆ. ವೈ. ನಾರಾಯಣಸ್ವಾಮಿ, ನುಡಿಯ ಒಡಲು ಕುರಿತು ಹಂಪಿ ಕನ್ನಡ ವಿವಿಯ ಪ್ರೊ. ಮಹದೇವಯ್ಯ, ನುಡಿಯರಿಮೆ ಕುರಿತು ಸಹ್ಯಾದ್ರಿ ಕಲಾ ಕಾಲೇಜಿನ ಪ್ರೊ. ಟಿ. ಅವಿನಾಶ್, ಇಂಗ್ಲೀಷ್ ಸಂಕಥನದ ಬಗ್ಗೆ ಸಾಗರದ ಇಂದಿರಾಗಾಂಧಿ ಮಹಿಳಾ ಸರಕಾರಿ ಕಾಲೇಜಿನ ಪ್ರೊ. ಬಿ. ಎಲ್ ರಾಜು ಮಾತನಾಡಿದರು.
ಅತಿಥಿಯಾಗಿ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್‍ಯ ಪ್ರೊ. ಕೆ. ಬಿ. ಧನಂಜಯ ಅಗಮಿಸಿದ್ದರು. ಅಧ್ಯಕ್ಷತೆಯನ್ನು ಕತೆಗಾರ, ನಿವೃತ್ತ ಪ್ರಾಧ್ಯಾಪಕ ಅಮರೇಶ್ ನುಗಡೋಣಿ ವಹಿಸಿದ್ದರು.
ಪುಸ್ತಕದ ಕರ್ತೃ ಪ್ರೊ. ಮೇಟಿ ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಸಹ್ಯಾದ್ರಿ ಕಲಾ ತಂಡದ ಮುಖ್ಯಸ್ಥ ಜಿ. ಆರ್. ಲವ ಕಾರ್‍ಯಕ್ರಮ ನಿರೂಪಿಸಿ, ಸ್ವಾಗತಿಸಿದರು.