ಸಮಾಜವಾದಿ ನಾಯಕ ಈ ದೇಶ ಕಂಡ ಮಾದರಿ ರಾಜಕಾರಣಿ ಹಾಗೂ ಸಾಮಾಜಿಕ ನ್ಯಾಯದ ಪ್ರತಿಪಾದಕ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವದ ಅಂಗವಾಗಿ ವರ್ಷವಿಡೀ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.
ಶಿವಮೊಗ್ಗದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.20 ರಂದು ಜನ್ಮಶತಮಾನೋತ್ಸವಕ್ಕೆ ಚಾಲನೆ ನೀಡಲಾಗುವುದು. ಅಂದು ಮಧ್ಯಾಹ್ನ ತೀರ್ಥಹಳ್ಳಿ ತಾಲೂಕು ಆರಗ ಸಮೀಪದ ಗೋಪಾಲಗೌಡರ ಜನ್ಮಸ್ಥಳ ಶಾಂತವೇರಿಯಿಂದ ಜಾಗ್ರತ ಜ್ಯೋತಿ ಹೊರಡಲಿದೆ. ವಿವಿಧ ಜಾನಪದ ಕಲಾತಂಡಗಳೊಂದಿಗೆ ತೀರ್ಥಹಳ್ಳಿಯ ಗೋಪಾಲಗೌಡ ರಂಗಮಂದಿರದವರೆಗೆ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಹೇಳಿದರು.
ಸಂಜೆ ೫ ಗಂಟೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸುವರು. ಗೋಪಾಲಗೌಡರ ಒಡನಾಡಿಗಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸನ್ಮಾನಿಸುವರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಾ.ಪ್ರಕಾಶ್ ಕಮ್ಮರಡಿ, ಬಿ.ಆರ್.ಜಯಂತ್, ಕೆ.ಟಿ.ಗಂಗಾಧರ್, ಕಂಬಳಿಗೆರೆ ರಾಜೇಂದ್ರ ಗೋಪಾಲಗೌಡರ ಸಾಹಿತ್ಯ, ರಾಜಕಾರಣ, ಹೋರಾಟಗಳ ಕುರಿತು ಮಾತನಾಡುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಡಿ.ಮಂಜುನಾಥ್ ಮಾತನಾಡಿ, ಗೋಪಾಲಗೌಡರ ಹೆಸರಿಲ್ಲದೆ ಈ ದೇಶ ಮತ್ತು ರಾಜ್ಯದ ರಾಜಕಾರಣವನ್ನು ಚರ್ಚೆಮಾಡಲು ಸಾಧ್ಯವಿಲ್ಲ.ಅಂತಹ ಮಾದರಿ ರಾಜಕಾರಣಿ ಜನ್ಮ ಶತಮಾನೋತ್ಸವ ಅಂಗವಾಗಿ ಅವರ ರಾಜಕೀಯ ಸಿದ್ಧಾಂತಗಳನ್ನು ಯುವಪೀಳಿಗೆಗೆ ತಿಳಿಸುವ ಕೆಲಸ ಮಾಡಲಾಗುವುದು. ಮುಂದಿನ ಒಂದು ವರ್ಷ ಕಾಲ ಶಾಲಾ ಹಂತದಿಂದ ಹಿಡಿದು ಸಾರ್ವಜನಿಕರಿಗೆ ಗೋಪಾಲಗೌಡರ ಪರಿಚಯ ಮಾಡುವಂತಹ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಮಾಜಿ ಶಿಕ್ಷಣಾಧಿಕಾರಿ ರತ್ನಯ್ಯ ಮತ್ತಿತರರು ಹಾಜರಿದ್ದರು.
ಇಂದಿನ ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶಕ್ಕೆ ಗೋಪಾಲಗೌಡರ ಚಿಂತನೆಗಳು ಅತ್ಯಗತ್ಯವಾಗಿವೆ.ಅವರಂತಹ ಸರಳ, ಸಜ್ಜನಿಯುಳ್ಳ ಮತ್ತು ಸಾಮಾಜಿಕ ಬದ್ಧತೆಯ ರಾಜಕಾರಣಿ ಸಿಗುವುದಿಲ್ಲ. ಅವರ ಸಿದ್ಧಾಂತಗಳನ್ನು ಯುವಜನಾಂಗಕ್ಕೆ ತಲುಪಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಿದೆ. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡ ಜನಶಕ್ತಿಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಆರ್.ಎಂ.ಮಂಜುನಾಥ ಗೌಡ