Malenadu Mitra
ರಾಜ್ಯ ಶಿವಮೊಗ್ಗ

ನೂತನ ಶಿಕ್ಷಣ ನೀತಿಯಿಂದ ಉದ್ಯೋಗಾವಕಾಶ ಹೆಚ್ಚಲಿದೆ: ಪ್ರೊ. ವೈ. ಎಸ್. ಸಿದ್ದೇಗೌಡ

ಕುವೆಂಪು ವಿವಿ: ಸಮಾಜಕಾರ್ಯ ವಿಭಾಗದ ವತಿಯಿಂದ ನೂತನ ಶಿಕ್ಷಣ ನೀತಿ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ಶಂಕರಘಟ್ಟ, ಮಾ. 17: ಸರ್ಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯು ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ. ಪದವಿ ಹಂತದಲ್ಲಿಯೇ ಅಂತರ್‍ಶಿಸ್ತೀಯ ಅಧ್ಯಯನ ಕೈಗೊಳ್ಳಲು ನೆರವಾಗುವುದರ ಜೊತೆಗೆ ಉದ್ಯೋಗ ಕೇಂದ್ರಿತ ಕೌಶಲ್ಯಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಲಿದೆ. ಇದರಿಂದಾಗಿ ಭವಿಷ್ಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚಳವಾಗಲಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗವು ಗುರುವಾರ ಬಸವ ಭವನದಲ್ಲಿ, ‘ನೂತನ ಶಿಕ್ಷಣ ನೀತಿ ಮತ್ತು ಸಮಾಜಕಾರ್ಯ’ ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೂತನ ಶಿಕ್ಷಣ ನೀತಿಯ ಅನುಷ್ಠಾನದ ಆರಂಭಿಕ ಹಂತದಲ್ಲಿರುವುದರಿಂದ ಸಾಂಪ್ರದಾಯಿಕವಾಗಿ ಬೋಧಿಸಲಾಗುತ್ತಿದ್ದ ಪಠ್ಯಕ್ರಮವನ್ನು ಹೊಸ ಮಾದರಿಗೆ ಅಳವಡಿಸಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣದಿಂದ ಸರ್ಕಾರ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ನೆರವಾಗುವ ಉದ್ದೇಶದಿಂದ ಮಾದರಿ ಪಠ್ಯಕ್ರಮ ರಚನೆಗೆ ಸಮಿತಿಗಳನ್ನು ರಚಿಸಿತ್ತು.

ಸಮಾಜ ವಿಜ್ಞಾನಗಳ ಪಠ್ಯಕ್ರಮ ರಚನಾ ಸಮಿತಿಯ ಅಧ್ಯಕ್ಷರಾಗಿ ಸರ್ಕಾರ ತಮ್ಮನ್ನು ನೇಮಿಸಿದಾಗ, ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿಗಳಿಗೆ ನೆರವು ಒದಗಿಸುವ ಉದ್ದೇಶದಿಂದ ಮಾದರಿ ಪಠ್ಯಕ್ರಮವನ್ನು ರಚಿಸಿ ಕಳುಹಿಸಿಕೊಡಲಾಯಿತು. ಆದರೆ ನೂತನ ಶಿಕ್ಷಣ ನೀತಿಯ ಪ್ರಕಾರ ಆಯಾ ವಿಶ್ವವಿದ್ಯಾಲಯಗಳು ಈ ಮಾದರಿ ಸಂರಚನೆ ಮತ್ತು ವಿಷಯಗಳ ಶೀರ್ಷಿಕೆಗಳನ್ನು ಉಳಿಸಿಕೊಂಡು ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ ಎಂದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಬಿ. ರಮೇಶ್ ಮಾತನಾಡಿ, ನೂತನ ಶಿಕ್ಷಣ ನೀತಿ ಇತರ ಎಲ್ಲ ವಿಷಯಗಳಂತೆ ಸಮಾಜ ಕಾರ್ಯ ವಿಷಯಕ್ಕೂ ಹೊಸ ಸಾಧ್ಯತೆಗಳನ್ನು ಸೃಷ್ಟಿಸಿದೆ. ಸಮಾಜದ ಸರ್ವತೋಮುಖ ಬೆಳವಣ ಗೆಗೆ ಪೂರಕವಾಗಿ ಕಾರ್ಯನಿರ್ವಹಿಸುವ ಕ್ರಿಯಾತ್ಮಕ ಕಾರ್ಯದಲ್ಲಿ ಸಮಾಜ ಕಾರ್ಯ ಪದವೀಧರರು ವೃತ್ತಿಪರ ಸೇವೆ ಒದಗಿಸುತ್ತಾ ಬಂದಿದ್ದಾರೆ. ಹೊಸದಾಗಿ ಅಳವಡಿಸಿಕೊಂಡಿರುವ ಅಂತರ್‍ಶಿಸ್ತೀಯ ಅಧ್ಯಯನವು ಸಮಾಜ ಕಾರ್ಯ ಪದವೀಧರರ ಲೋಕದೃಷ್ಟಿಯನ್ನು ಇನ್ನಷ್ಟು ವಿಸ್ತರಿಸಲಿದೆ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಸಮಾಜದ ಎಲ್ಲ ರಂಗಗಳಲ್ಲಿ ಮೌಲ್ಯಗಳ ಅಧಃಪತನವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಹೊಸ ಶಿಕ್ಷಣ ನೀತಿಯ ಸಾಧ್ಯತೆಗಳನ್ನು ಅಳವಡಿಸಿಕೊಂಡು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಹೀಗೆ ಎಲ್ಲ ವರ್ಗಗಳನ್ನು ಮೇಲೆತ್ತುವ ಗುರುತರ ಜವಾಬ್ದಾರಿಯನ್ನು ಸಮಾಜ ಕಾರ್ಯದ ವೃತ್ತಿಪರರು ನಿರ್ವಹಿಸಬೇಕಿದೆ. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ತಳಹಂತದಲ್ಲಿ ಕಾರ್ಯನಿರ್ವಹಿಸುವ ಸಾಮಾಜಿಕ ಕಾರ್ಯಕರ್ತರು ರಾಷ್ಟ್ರದ ಅಭಿವೃದ್ಧಿಗೆ ಇಂಬುಕೊಡುವ ತೆರೆಮರೆಯ ನಾಯಕರು ಎಂದು ಶ್ಲಾಘಿಸಿದರು.

ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಪ್ರೊ. ಎ. ರಾಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಸಂಗೀತಾ ಮಾನೆ, ಪ್ರೊ. ಪರಶುರಾಮ ಕೆ. ಜಿ., ಪ್ರೊ. ಲೋಕೇಶ ವಿಚಾರ ಮಂಡಿಸಿದರು. ಪ್ರೊ. ಗುರುಲಿಂಗಯ್ಯ, ಪ್ರೊ. ಈ. ಚಂದ್ರಶೇಖರ್, ಡಾ. ಸಂಧ್ಯಾ ಕಾವೇರಿ, ಪ್ರೊ. ಅಂಜನಪ್ಪ, ಡಾ. ದಿಲೀಪ್ ಕುಮಾರ್, ಡಾ. ಸರವಣ, ಡಾ. ರವಿಶಂಕರ್, ಡಾ. ಮಹೇಶ್, ಶ್ರೀಧರ್, ಸುನಿತಾ, ನೇತ್ರಾವತಿ, ವಿವಿಧ ವಿಶ್ವವಿದ್ಯಾಲಯಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ನಾಲ್ಕು ದತ್ತಿನಿಧಿ ಸ್ವರ್ಣಪದಕ ನೀಡಿರುವ ಸೋಮಶೇಖರ್ ಗೆ ಸನ್ಮಾನ

ಕುವೆಂಪು ವಿಶ್ವವಿದ್ಯಾಲಯದ ನಾಲ್ಕು ನಿಕಾಯಗಳಲ್ಲಿ ತಲಾ ಒಂದೊಂದು ದತ್ತಿನಿಧಿ ಸ್ವರ್ಣಪದಕವನ್ನು ಸ್ಥಾಪಿಸಿರುವ ಅಭಿವೃದ್ಧಿ ವಿಭಾಗದ ಹಿರಿಯ ಸಹಾಯಕ ಪಿ. ಸಿ. ಸೋಮಶೇಖರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಮಾಜಕಾರ್ಯ ವಿಭಾಗ, ಎಂಎಡ್, ಔದ್ಯೋಗಿಕ ರಸಾಯನ ಶಾಸ್ತ್ರ ಮತ್ತು ವಾಣಿಜ್ಯ ಶಾಸ್ತ್ರ ವಿಭಾಗಗಳ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ‘ಸೋಮಶೇಖರ್ ಪಿ.ಸಿ. S/O ಪರಶುರಾಮಪ್ಪ ಬಿ. ಎಚ್’ ಹೆಸರಿನಲ್ಲಿ ತಲಾ ಒಂದು ಲಕ್ಷ ಠೇವಣ ನೀಡಿ, ದತ್ತಿನಿಧಿ ಸ್ವರ್ಣ ಪದಕಗಳನ್ನು ಸ್ಥಾಪಿಸಿದ್ದಾರೆ. ಬರುವ ಜುಲೈ ತಿಂಗಳಲ್ಲಿ ನಿವೃತ್ತರಾಗಲಿರುವ ಸೋಮಶೇಖರ್, ಕರ್ತವ್ಯಕ್ಕೆ ವರದಿ ಮಾಡಿಕೊಂಡ ಮೊದಲ ದಿನದಿಂದ ಇದುವರೆಗೆ ಒಂದು ದಿನದ ರಜೆಯ ಸೌಲಭ್ಯವನ್ನೂ ಬಳಸಿಕೊಂಡಿಲ್ಲ ಎಂಬುದು ವಿಶೇಷ. ಇವರ ಸೇವೆಯನ್ನು ಪರಿಗಣಿಸಿ ವಿಶ್ವವಿದ್ಯಾಲಯ ಈ ಹಿಂದೆ ‘ಸಾಧನಾ ಪುರಸ್ಕಾರ’ ನೀಡಿ ಗೌರವಿಸಿದೆ.

Ad Widget

Related posts

ರಕ್ತದಾನ ಮಾಡುವ ಮೂಲಕ ರಕ್ತದಾನಿಗಳ ದಿನಾಚರಣೆ ಮಾಡಿದ ಡಾ.ರಾಜನಂದಿನಿ ಕಾಗೋಡು

Malenadu Mirror Desk

ಮುಂದುವರಿದ ಕೊರೊನ ಅಟ್ಟಹಾಸ : 15 ಸಾವು

Malenadu Mirror Desk

ಸಹ್ಯಾದ್ರಿ ಕ್ಯಾಂಪಸ್ ಹಸ್ತಾಂತರಕ್ಕೆ ಒಕ್ಕೊರಲ ವಿರೋಧ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.