ಮಾಹಿತಿ ತಂತ್ರಜ್ಞಾನದ ನಾಗಾಲೋಟದ ಈ ಹೊತ್ತಿನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಬದುಕು ರೂಪಿಸಿಕೊಳ್ಳಲು ವಿಪುಲ ಅವಕಾಶಗಳಿವೆ ಅವುಗಳನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಭವಿಷ್ಯ ಅಡಗಿದೆ ಎಂದು ವಿಶ್ರಾಂತ ಪ್ರಾಂಶುಪಾಲರಾದ ಹಿಳ್ಳೋಡಿ ಕೃಷ್ಣಮೂರ್ತಿ ಹೇಳಿದರು.
ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದಲ್ಲಿ ಭಾನುವಾರ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಎನ್‌ಎಸ್‌ಎಸ್ ಶಿಬಿರದಲ್ಲಿ ಮಕ್ಕಳು ಹಳ್ಳಿಗಳಿಗೆ ಬಂದು ಅಲ್ಲಿನ ಜನಜೀವನ, ಕೃಷಿ ಇತ್ಯಾದಿ ಜೀವನಕ್ರಮಗಳನ್ನು ನೋಡಿದಾಗ ಅವರಿಗೆ ಜೀವನದ ವಾಸ್ತವದ ಅರಿವಾಗುತ್ತದೆ ಎಂದು ಹೇಳಿದರು.
ಕಾಲೇಜುದಿನಗಳ ನಂತರ ಏನು ಎಂಬುದನ್ನು ಪದವಿ ಹಂತದಲ್ಲಿ ಮಕ್ಕಳು ವಿದ್ಯಾರ್ಥಿಗಳು ನಿರ್ಧರಿಸಬೇಕು. ಆಸಕ್ತಿಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಮುನ್ನಡೆಯಬೇಕು. ಪದವಿ ಪಡೆದರೆ ಮಾತ್ರ ಸಾಲದು ನೈತಿಕ ಶಿಕ್ಷಣವೂ ಇಂದಿನ ಅಗತ್ಯವಾಗಿದೆ. ಇಂತಹ ಶಿಬಿರಗಳು ಅದನ್ನು ಕಲಿಸುತ್ತವೆ. ನಾವು ಕಲಿತ ಶಾಲೆ, ಕಲಿಸಿದ ಗುರುಗಳು, ಅನ್ನ ನೀಡಿದ ಸ್ಥಳಗಳನ್ನು ಯಾವತ್ತೂ ಮರೆಯಬಾರದು ಎಂದು ಕೃಷ್ಣಮೂರ್ತಿ ಹೇಳಿದರು.
ಯೂನಿಯನ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಕಾಗರಸೆ ಓಂಕಾರ್ ಮಾತನಾಡಿ, ನಮ್ಮನ್ನು ನಾವು ಸ್ಪರ್ಧೆಗೆ ಒಡ್ಡಿಕೊಳ್ಳದಿದ್ದರೆ ಯಶಸ್ಸು ಸಿಗದು. ಸವಾಲುಗಳಿಗೆ ಅಂಜದೆ ಮುಂದಡಿಯಿಡುವ ಛಾತಿ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ಹೇಳಿದರು. ದುರ್ಗಾಂಬ ಗೆಳೆಯರ ಬಳಗದ ಅಧ್ಯಕ್ಷ ಹೆಚ್.ವಿ.ಗಿರೀಶ್ ಮಾತನಾಡಿ, ಹಿಂದೆ ವಿದ್ಯಾಭ್ಯಾಸಕ್ಕೆ ತುಂಬಾ ಕಷ್ಟವಿತ್ತು. ಆದರೆ ಈಗಿನ ಮಕ್ಕಳಿಗೆ ಎಲ್ಲಾ ಸೌಲಭ್ಯಗಳಿವೆ ಇವುಗಳನ್ನು ಬಳಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದರು.
ಪತ್ರಕರ್ತ ನಾಗರಾಜ್ ನೇರಿಗೆ, ಗ್ರಾಮ ಪಂಚಾಯಿತಿ ಸದಸ್ಯೆ ಮಾನಸ ಸತೀಶ್, ಉಪವಲಯಾರಣ್ಯಾಧಿಕಾರಿ ಚೆನ್ನಬಸಪ್ಪ, ಭಗತ್‌ಸಿಂಗ್ ಬಾಯ್ಸ್ ಯುವಕರ ಸಂಘದ ಅಧ್ಯಕ್ಷ ನಿತ್ಯಾನಂದ,ಮಹಿಳಾ ಒಕ್ಕೂಟದ ಅಧ್ಯಕ್ಷೆ ನೇತ್ರಾವತಿ ಶ್ರೀಕಾಂತ್, ರಾಷ್ಟೀಯ ಸೇವಾಯೋಜನೆ ಅಧಿಕಾರಿಗಳಾದ ಡಾ.ನಾಗಾರ್ಜುನ, ಡಾ. ವೆಂಕಟೇಶ್ ವೇದಿಕೆಯಲ್ಲಿದ್ದರು. ಗ್ರಾಮಪಂಚಾಯಿತಿ ಸದಸ್ಯ ಪ್ರದೀಪ್ ಹೆಬ್ಬೂರು ಅಧ್ಯಕ್ಷತೆವಹಿಸಿದ್ದರು. ನಂತರ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಡಾ.ಕುಂದನ್ ಬಸವರಾಜ್ ಅವರು ವಿಶೇಷ ಉಪನ್ಯಾಸ ನೀಡಿದರು.