ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಅವರನ್ನು ನಾಡಿನುದ್ದಗಲಕ್ಕೂ ಜನ ಈ ರೀತಿ ಪ್ರೀತಿಸಲು ಅವರು ಮಾಡಿರುವ ಸಮಾಜಮುಖಿ ಕೆಲಸಗಳೇ ಕಾರಣ. ಎಲ್ಲ ಸ್ಥರಗಳನ್ನೂ ಮೀರಿ ಬೆಳೆದ ಹೃದಯವಂತ ಅವರಾಗಿದ್ದರಿಂದ ಇಂದು ಅಭಿಮಾನಿಗಳ ಹೃದಯದಲ್ಲಿ ನೆಲೆ ನಿಂತಿದ್ದಾರೆ ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಹೇಳಿದರು.
ಶಿವಮೊಗ್ಗ ತಾಲೂಕು ಚೋಡನಾಳ ಗ್ರಾಮದಲ್ಲಿ ಗುರುವಾರ ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು. ನಾಡಿಗೆ ಆದರ್ಶ ವ್ಯಕ್ತಿಯಾಗಿರುವ ಪುನೀತ್ ಅವರ ಸ್ಮರಣೆ ಕುರಿತ ಕಾರ್ಯಕ್ರಮಕ್ಕೆ ಹೋಗಲು ನನಗೆ ಬೇಸರವಾಗುತ್ತದೆ. ಅವರ ಬಂಧುವೂ ಆಗಿರುವ ನನಗೆ ಕಾರ್ಯಕ್ರಮಕ್ಕೆ ಭಾಗವಹಿಸಿದರೆ ಅವರ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಾರೆ ಎಂಬ ಆರೋಪ ಬರಬಾರದು. ಅವರು ರಾಜಕೀಯವನ್ನು ಮೀರಿ ಬೆಳೆದವರು ಈ ಕಾರಣದಿಂದ ನಾನು ಅವರ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಭಾಗವಹಿಸದಿರಲು ನಿರ್ಧರಿಸಿದ್ದೇನೆ ಎಂದರು.
ಪುನೀತ್ ಅವರು ತಮ್ಮ ವ್ಯಕ್ತಿತ್ವ ಸಿನೆಮಾ ಮತ್ತು ಕೆಲಸಗಳ ಮೂಲಕ ಯುವಜನರಿಗೆ ಒಂದು ಉದಾತ್ತ ಸಂದೇಶ ನೀಡಿದ್ದಾರೆ. ಅವರು ಬೌತಿಕವಾಗಿ ನಮ್ಮೊಂದಿಗಿಲ್ಲ ಆದರೆ ಕೆಲಸಗಳು, ಮಾದರಿ ವ್ಯಕ್ತಿತ್ವದ ಮೂಲಕ ಎಲ್ಲರೊಂದಿಗಿದ್ದಾರೆ ಅವರಂತೆ ನಾವೂ ಜನಮುಖಿಯಾಗಿ ಚಿಂತನೆ ಮಾಡೋಣ ಎಂದು ಹೇಳಿದರು.
ಪುತ್ಥಳಿ ಅನಾವರಣ ಮಾಡಿದ ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರು ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ಅನಾವರಣಕ್ಕೆ ಇಡೀ ಗ್ರಾಮಸ್ಥರು ಕೈಜೋಡಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಪ್ರತಿ ವರ್ಷ ಅವರ ಸ್ಮರಣೆಗಾಗಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತಹ ಕೆಲಸ ಮಾಡಿ ಎಂದು ಹೇಳಿದರಲ್ಲದೆ, ಮಲೆನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಮಧುಬಂಗಾರಪ್ಪ ಅವರು ನಡೆಸುವ ಹೋರಾಟಗಳಿಗೆ ಎಲ್ಲರೂ ಬೆಂಬಲಿಸೋಣ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಸದಸ್ಯ ಎನ್. ಕೃಷ್ಣಮೂರ್ತಿ ಅಧ್ಯಕ್ಷತೆವಹಿಸಿದ್ದರು.
ಮಾಜಿ ಶಾಸಕಿ ಶಾರದಾಪೂರ್ಯಾನಾಯ್ಕ, ಪ್ರಮುಖರಾದ ಎಂ.ಬಿ.ರಾಜಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಪಲ್ಲವಿ, ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಆರ್.ಹುಲ್ತಿಕೊಪ್ಪ, ಜಿ.ಡಿ.ಮಂಜುನಾಥ್, ನಾಗರಾಜ್ ಕೈಸೋಡಿ, ಉಪನ್ಯಾಸಕ ಸಚಿನ್ ಹಿಳ್ಳೋಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್, ಅನಿತಾ ಸುಧಾಕರ್, ರೇವತಿ ಲೋಕೇಶ್, ಸುದರ್ಶನ ,ಕೆ.ಎಸ್.ಶಿವಪ್ಪ, ನಾಗರಾಜ್ ಕತ್ತಿ, ಕಟ್ಟಿಗೆಹಳ್ಳ ರಘುಪತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.