ನಮ್ಮ ದೇಶದಲ್ಲಿ ಸಂವಿಧಾನ, ನ್ಯಾಯಾಲಯ ಇದೆ. ನ್ಯಾಯಾಲಯ, ಸಂವಿಧಾನ ಏನು ಹೇಳುತ್ತದೆ ಅದನ್ನು ಎಲ್ಲಾ ಧರ್ಮದವರು ಪರಿಪಾಲನೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಮುಸಲ್ಮಾನರನ್ನು ತೃಪ್ತಿಪಡಿಸುವ ಒಂದೇ ಕಾರಣಕ್ಕೆ ಸಂವಿಧಾನ ಮೀರಿ, ಕೋರ್ಟ್ ಆದೇಶ ಮೀರಿ ಮಾತನಾಡುತ್ತಿದ್ದಾರೆ. ನೀವು ಬಹಳ ಕಾನೂನು ತಿಳಿದುಕೊಂಡಿರುವವರು, ಸಂವಿಧಾನ ಗೊತ್ತಿರುವವರು. ಅದೇ ರೀತಿ ಯಾವಾಗಲೂ ಕೋರ್ಟ್ ಅನ್ನೇ ಪ್ರಸ್ತಾಪ ಮಾಡುವವರು. ನೀವು ಏಕೆ ಕೋರ್ಟ್ ಮಾತನ್ನು ಮೀರಬೇಡಿ ಅಂತಾ ಮುಸಲ್ಮಾನರಿಗೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ಕೋರ್ಟ್ ಆದೇಶ ಮೀರಿದರೆ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ವಯೋವೃದ್ದರಿಗೆ ತೊಂದರೆ ಆಗುತ್ತದೆ ಎಂಬುದು ನಿಮ್ಮ ಬಾಯಲ್ಲಿ ಸ್ಪಷ್ಟವಾಗಿ ಬರುತ್ತಿಲ್ಲ. ಓಟಿನ ರಾಜಕಾರಣಕ್ಕೋಸ್ಕರ ನೀವು ಈ ರೀತಿ ಮಾಡುತ್ತಿರುವುದು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಸಂವಿಧಾನ ಮೀರಿ ನಡೆದರೆ, ನ್ಯಾಯಾಂಗ ಆದೇಶ ಮೀರಿ ನಡೆದರೆ, ಕರ್ನಾಟಕ ರಾಜ್ಯದಲ್ಲೂ ಮುಂದಿನ ದಿನಗಳಲ್ಲಿ ವಿಪಕ್ಷಕ್ಕೆ ಬೇಕಾದ ಸಂಖ್ಯೆಯನ್ನು ನೀವು ಗೆಲ್ಲುವುದಿಲ್ಲ. ಜನ ಕಾಂಗ್ರೆಸ್ ನ್ನು ತಿರಸ್ಕಾರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇವಸ್ಥಾನ, ಚರ್ಚ್ ಗಳಲ್ಲಿ ಹೇಗೆ ಯಾರಿಗೂ ತೊಂದರೆ ಆಗದಂತೆ ಪೂಜೆ ಮಾಡುತ್ತಾರೆ ಹಾಗೆ ನಿಮ್ಮ ಮಸೀದಿಗಳಲ್ಲೂ ಬಳಸಿ. ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೬ ಗಂಟೆಯವರೆಗೆ ಧ್ವನಿವರ್ಧಕ ಬೇಡ ಅಂತಾ ಸುಪ್ರೀಂ ಕೋರ್ಟ್ ಹೇಳಿದ ಮೇಲೆ ನೀವು ಏಕೆ ಅದನ್ನು ಮೀರುತ್ತಿದ್ದೀರಾ ಎಂದು ಪ್ರಶ್ನೆ ಹಾಕಿದರು.
ಹಿಜಾಬ್ ಬಗ್ಗೆ ಇದೇ ರೀತಿ ಚರ್ಚೆ ಬಂತು. ಕೋರ್ಟ್ ತೀರ್ಮಾನ ಕೊಟ್ಟಿತ್ತು. ಹಿಜಾಬ್ ಬಗ್ಗೆ ಕೋರ್ಟ್ ತೀರ್ಪು ಕೊಟ್ಟ ನಂತರವೂ ಪಿಎಫ್ ಐ, ಎಸ್ ಡಿಪಿಐ ಬಂದ್ ಕರೆ ಕೊಟ್ಟರು. ಬಂದ್ ಕರೆ ಕೊಟ್ಟ ಅರ್ಥ ಏನು. ಕೋರ್ಟ್ ತೀರ್ಪನ್ನು ನಾವು ತಿರಸ್ಕಾರ ಮಾಡಿದ್ದೇವೆ ಅಂತಲ್ಲವೆ, ನ್ಯಾಯಾಲಯಕ್ಕೆ ಅಪಮಾನ ಮಾಡಿದ ಹಾಗೆ. ಅದಕ್ಕೆ ಕಾಂಗ್ರೆಸ್ ನ ಸಿದ್ದರಾಮಯ್ಯ ಬೆಂಬಲ ಕೊಡ್ತಾರೆ ಎಂದು ದೂರಿದರು.
ಪ್ರತಿಪಕ್ಷದವರು ಎಲ್ಲಾ ಕಡೆ ಸರಕಾರದ ವೈಫಲ್ಯ ಅಂತಾ ಹೇಳುತ್ತಿರುವ ನಡುವೆಯೇ ನಾವು ಎಲ್ಲಾ ಚುನಾವಣೆಯಲ್ಲಿ ಗೆಲ್ಲುತ್ತಿದ್ದೇವೆ. ಸರಕಾರ ವೈಫಲ್ಯ ಅಂತಾ ಜನರೇ ತೀರ್ಮಾನ ಮಾಡಬೇಕು. ಸರಕಾರದ ವೈಫಲ್ಯವನ್ನು ಕಾಂಗ್ರೆಸ್, ಜೆಡಿಎಸ್ ತೀರ್ಮಾನ ಮಾಡೋದಲ್ಲ. ಸರಕಾರ ಒಳ್ಳೆ ಕೆಲಸ ಮಾಡ್ತಿದೆ ಎನ್ನುವ ಒಂದೇ ಕಾರಣಕ್ಕೆ ಗ್ರಾಮ ಪಂಚಾಯ್ತಿಯಿಂದ ಹಿಡಿದು, ಲೋಕಸಭೆಯವರೆಗೆ ಎಲ್ಲಾ ಚುನಾವಣೆಯಲ್ಲಿ ನಾವೇ ಗೆದ್ದುಕೊಂಡು ಬಂದಿದ್ದೇವೆ ಎಂದರು.
ಹರ್ಷ ಕೊಲೆ ಪ್ರಕರಣ, ಎನ್ ಐಎ ತನಿಖೆ ವಿಚಾರಣೆ ವಿಚಾರದಲ್ಲಿ ಈಗಾಗಲೇ ಹರ್ಷ ಕೊಲೆಯಾದ ಸಂದರ್ಭದಲ್ಲೇ ನಾನು ಹೇಳಿದ್ದೆ. ಇದರ ಹಿಂದೆ ರಾಷ್ಟ್ರ ಅಥವಾ ಅಂತರರಾಷ್ಟ್ರೀಯ ಮಟ್ಟದ ಷಡ್ಯಂತ್ರ ಇರಬಹುದು. ಹೀಗಾಗಿ ಎನ್ ಐಎ ಮೂಲಕ ತನಿಖೆಯಾದರೆ ಒಳ್ಳೆಯದು ಅಂತಾ ಹೇಳಿದ್ದೆ. ಈಗಾಗಲೇ ಎನ್ ಐಎ ಈ ಕೇಸ್ ತೆಗೆದುಕೊಂಡಿದೆ. ಮೇಲ್ನೋಟಕ್ಕೆ ಕುತಂತ್ರ ಮಾಡಿ ಹರ್ಷನ ಕೊಲೆ ಮಾಡಲಾಗಿದೆ ಎಂದು ಎನ್ ಐಎ ನವರು ಹೇಳಿದ್ದಾರೆ.
ಕೆ.ಎಸ್.ಈಶ್ವರಪ್ಪ, ಸಚಿವರು