Malenadu Mitra
ರಾಜ್ಯ ಶಿವಮೊಗ್ಗ

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷ ಸ್ಥಾನವಿದೆ: ಕೆ.ಎಸ್. ಈಶ್ವರಪ್ಪ

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷ ಸ್ಥಾನವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
 ನಗರದ ಕುವೆಂಪು ರಂಗಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯಿಂದ ಏರ್ಪಡಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮಹಿಳೆಯರಿಗೆ ಕೊಡುತ್ತಿರುವಷ್ಟು ವಿಶೇಷ ಗೌರವ ಜಗತ್ತಿನ ಯಾವ ರಾಷ್ಟ್ರದಲ್ಲೂ ಇಲ್ಲ. ದೇಶ ರಕ್ಷಣೆ ಮಾಡುವಲ್ಲಿ ಮಹಿಳೆಯರ ಪಾತ್ರ ಕೂಡ ಪ್ರಮುಖವಾಗಿದೆ. ಭಾರತದಲ್ಲಿ ಮಾತ್ರ ಮಹಿಳೆಯನ್ನು ತಾಯಿ ಎಂದು ಕರೆಯಲಾಗುತ್ತಿದೆ. ತಾಯಿ ಎಂಬ ಪದಕ್ಕೆ ಆಳವಾದ ಮತ್ತು ವಿಶಾಲವಾದ ಅರ್ಥವಿದೆ. ಆದ್ದರಿಂದಲೇ ಮಹಿಳೆಯನ್ನು ತಾಯಿ ಎಂದು ಕರೆಯಲಾಗುತ್ತಿದೆ ಎಂದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ಸಂಭವಿಸಿದ ಸಂದರ್ಭದಲ್ಲಿ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ನಮ್ಮ ದೇಶ ಯುದ್ದದಲ್ಲಿ ಗೆಲುವನ್ನು ಸಾಧಿಸಲಿದೆ, ಏಕೆಂದರೆ ನಮ್ಮ ದೇಶದ ಪ್ರಧಾನಿಯಾಗಿರುವ ಇಂದಿರಾಗಾಂಧಿಯವರು ದುರ್ಗಿಯಂತೆ ಮುನ್ನುಗುತ್ತಾರೆ. ಅವರೊಂದಿಗೆ ನಾವೆಲ್ಲರೂ ಜೊತೆಗೂಡೋಣ. ಶತ್ರು ಸೈನ್ಯವನ್ನು ಮಟ್ಟ ಹಾಕೋಣ ಎಂಬ ಮಾತನ್ನು ಹೇಳಿದ್ದರು ಎಂದು ನೆನಪಿಸಿಕೊಂಡರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಇದೇ ಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಮಹಿಳಾ ಸಿಬ್ಬಂದಿಗಳಿಗೆ ಓಓಡಿಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನಮ್ಮ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುರುಷನಿಗೆ ಸಮನಾಗಿ ಕೂಡ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಕೂಡ ಮಹಿಳೆಯರ ಪಾತ್ರ ಗಣನೀಯವಾಗಿದೆ. ಕ್ರೀಡಾ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮತ್ತೂರಿನ ಹೆಚ್.ಆರ್. ಕೇಶವಮೂರ್ತಿ, ಇಂದುಮತಿ ಸಾಲಿಮಠ್, ನೌಕರರ ಸಂಘದ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಮೋಹನ್ ಕುಮಾರ್, ಕೃಷ್ಣಮೂರ್ತಿ, ಪಾಪಣ್ಣ ಮುಂತಾದವರು ಉಪಸ್ಥಿತರಿದ್ದರು.

ನಾಲ್ಕು ಹೆಣ್ಣು  ಮಕ್ಕಳು ಮತ್ತು ಮಂತ್ರಿಸ್ಥಾನ
ನೀವು ನಾಲ್ಕು ಹೆಣ್ಣು ಮಕ್ಕಳ ತಂದೆಯಾದರೆ ಮುಂದೆ ಈ ರಾಜ್ಯದ ಮಂತ್ರಿಯಾಗುತ್ತೀರಿ, ನಾನು ಕೂಡ ನಾಲ್ಕು ಜನ ಹೆಣ್ಣು ಮಕ್ಕಳ ತಂದೆಯಾದ ಮೇಲೆಯೇ ಶಾಸಕನಾಗಿದ್ದು ಎಂದು ಸಚಿವ ಕೆ.ಎಸ್. ಈಶ್ವರಪ್ಪ, ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿಯವರ ಕುರಿತು ತಮಾಷೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಷಡಾಕ್ಷರಿಯವರು ನನಗೆ ಒಂದು ಹೆಣ್ಣು ಮಗುವಿದೆ ಎಂದರು.

Ad Widget

Related posts

ಸಂವಿಧಾನ ಹೇಳುತ್ತಿರುವುದೊಂದು, ಪ್ರಭುತ್ವ ಮಾಡುತ್ತಿರುವುದೊಂದು: ಸಿ. ಕೆ. ಮಹೇಶ್

Malenadu Mirror Desk

ವಿಕೃತಿ ತೊಡೆಯಲು ಸಾಮಾಜಿಕರಣ ಅಗತ್ಯ : ಡಿಡಿಪಿಐ ಬಸವರಾಜಪ್ಪ

Malenadu Mirror Desk

ನ್ಯಾಯಾಧೀಶರ ವಜಾಕ್ಕೆ ಆಗ್ರಹಿಸಿ ವಿಧಾನ ಸೌಧ ಚಲೊ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.