ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಉದ್ಘಾಟನಾ ಸಮಾರಂಭ ಏ. 15 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ನ ವ್ಯವಸ್ಥಾಪಕ ಟ್ರಸ್ಟಿ ಕಿರಣ್ ಕುಮಾರ್ ಕೆ. ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ರಸ್ತೆಯಲ್ಲಿರುವ ಜಾವಳ್ಳಿಯ ಶಾಲಾ ಕ್ಯಾಂಪಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿರಿಗೆರೆ ತರಳಬಾಳು ಶ್ರೀಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೂತನ ಕಟ್ಟಡ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಸಚಿವ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಸಂಸದರಾದ ಬಿ.ವೈ. ರಾಘವೇಂದ್ರ, ಜಿ.ಎಂ. ಸಿದ್ಧೇಶ್ವರ ಭಾಗವಹಿಸುವರು
ಶಾಸಕರಾದ ಕೆ.ಬಿ. ಅಶೋಕ್ ನಾಯ್ಕ್, ಎಸ್. ರುದ್ರೇಗೌಡ, ಮಾಡಾಳ್ ವಿರೂಪಾಕ್ಷಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಜಗದೀಶ್ ಜಿ. ಮಳಲಗದ್ದೆ, ಬಿಬಿಎಂಪಿ ಆಯುಕ್ತ ಕೆ.ಎ. ದಯಾನಂದ್, ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷಿ÷್ಮ ಪ್ರಸಾದ್, ಜಿಪಂ ಸಿಇಒ ಎಂ.ಎಲ್. ವೈಶಾಲಿ, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ಮಕ್ಕಳು ಮುಕ್ತವಾಗಿ ಯೋಚಿಸುತ್ತಾರೆ. ಅವರಿಗೆ ಜವಾಬ್ದಾರಿಯನ್ನು ಕಲಿಸುವುದು ನಮ್ಮ ಕೆಲಸ. ಪ್ರತಿ ಮಗುವಿನ ವೈಯಕ್ತಿಕ ಪ್ರತಿಭೆಯನ್ನು ನಾವು ಪೋಷಿಸುತ್ತೇವೆ. ಮಕ್ಕಳು ಒಂದು ವಿದೇಶಿ ಭಾಷೆ, ಒಂದು ಲಲಿತ ಕಲೆ, ಒಂದು ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತೇವೆ. ಇದಕ್ಕೆ ಪೂರಕವಾದ ವಾತಾವರಣ ನಮ್ಮ ಶಾಲೆಯ ಕಟ್ಟಡವೂ ಸೇರಿದಂತೆ ಶಿಕ್ಷಕರು ಮಾರ್ಗದರ್ಶಕರಾಗಿರುತ್ತಾರೆ. ಇಲ್ಲಿ ಆಧುನಿಕ ಕಲಿಕಾ ಉಪಕರಣಗಳಿವೆ. ಮಕ್ಕಳ ವೇಳಾಪಟ್ಟಿಯನ್ನು ಅವರೇ ನಿರ್ಧರಿಸುತ್ತಾರೆ. ಪ್ರತಿವಾರ ಮಕ್ಕಳ ಕಲಿಕೆಯ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತದೆ. 5 ನೇ ತರಗತಿವರೆಗೂ ಪರೀಕ್ಷೆಗಳೇ ಇರುವುದಿಲ್ಲ. ಅಚ್ಚರಿ ಎಂಬAತೆ ಈ ಶಾಲೆಯಲ್ಲಿ ಶಿಕ್ಷಕರೇ ಇಲ್ಲ. ಆದರೆ, ಅವರು ಮಾರ್ಗದರ್ಶಕರಾಗಿರುತ್ತಾರೆ. ಪ್ರತಿ ಮಗುವಿಗೆ ಹೆಚ್ಚು ಸಂಪನ್ಮೂಲಗಳನ್ನು ಒದಗಿಸಲಾಗುತ್ತದೆ ಎಂದರು.
ಸ್ಮರಣೆ, ಅರ್ಥಗ್ರಹಿಕೆ, ತೀರ್ಮಾನಿಸುವಿಕೆ, ಅನ್ವಯ, ಜ್ಞಾನವಾಗಿ ಮಾರ್ಪಡಿಸುವಿಕೆ ಇವೆಲ್ಲವನ್ನು ಇಲ್ಲಿ ಕಲಿಸಲಾಗುತ್ತದೆ. ಮುಖ್ಯವಾಗಿ ತಾರತಮ್ಯವಿಲ್ಲದ ಶಿಕ್ಷಣ ನೀಡಲಾಗುತ್ತದೆ. 2020 ರ ಶಿಕ್ಷಣ ನೀತಿಗಳು ಇಲ್ಲಿ ಸಾಕಾರಗೊಂಡಿವೆ. ಪ್ರತಿ ಮಗುವಿಗೆ 320 ರೀತಿಯ ಕೌಶಲ್ಯಗಳನ್ನು ನಾವು ಇಲ್ಲಿ ಕಲಿಸುತ್ತೇವೆ. ಸ್ವತಂತ್ರವಾದ ಚಿಂತನೆ ತರ್ಕ ಶಕ್ತಿಯಿಂದಾಗಿ ಇಲ್ಲಿನ ಮಕ್ಕಳು ನಾಯಕತ್ವದ ಪಾತ್ರ ವಹಿಸುತ್ತಾರೆ ಎಂದರು.
ಉದ್ಘಾಟನಾ ಸಮಾರಂಭಕ್ಕೆ ಮೊದಲು ಸುಗಮ ಸಂಗೀತ, ಮುಖ್ಯವಾಗಿ ಸಂಗೀತ ನಾಟಕ `ಹಕ್ಕಿ ಹಾಡು’ ಪ್ರದರ್ಶನವಿರುತ್ತದೆ. ನಮ್ಮ ಶಾಲೆಯ ಮಕ್ಕಳು ಅಭಿನಯಿಸುವ ಈ ನಾಟಕವನ್ನು ಕೋಟಗಾನಹಳ್ಳಿ ರಾಮಯ್ಯ ರಚಿಸಿದ್ದು, ಸತೀಶ್ ತಿಪಟೂರು ನಿರ್ದೇಶನ ಮಾಡಿದ್ದಾರೆ ಎಂದು ತಿಳಿಸಿದರು.
ದಾಖಲಾತಿ ಈಗಾಗಲೇ ಆರಂಭವಾಗಿದೆ. 2 ರಿಂದ 6 ವರ್ಷದೊಳಗಿನ ಮಕ್ಕಳು ಪ್ರೀ ಸ್ಕೂಲ್ ಗೆ ಪ್ರವೇಶ ಪಡೆಯಬಹುದಾಗಿದೆ. ಹಾಗೆಯೇ 6 ರಿಂದ 16 ವರ್ಷದ ಮಕ್ಕಳು 1 ರಿಂದ 10 ನೇ ತರಗತಿವರೆಗೆ ಪ್ರವೇಶ ಪಡೆಯಬಹುದಾಗಿದ್ದು, 10 ನೇ ತರಗತಿಯನ್ನು ನೇರವಾಗಿ ಕಲಿಯಬಹುದಾಗಿದೆ ಎಂದರು. ಹೆಚ್ಚಿನ ವಿವರಗಳಿಗೆ 99000 15264 ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಶಾಲಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಡಿ.ಎಸ್. ಅರುಣ್, ಕಾರ್ಯದರ್ಶಿ ಡಾ. ಧನಂಜಯ ಸರ್ಜಿ, ನಿರ್ದೇಶಕ ವಿನಿತ್ ದುಬೆ ಇದ್ದರು.
ಓಪನ್ ಮೈಂಡ್ಸ್ ಶಾಲೆ ವಿನೂತನವಾಗಿದ್ದು, ಮಕ್ಕಳು ಕಲಿಕೆಯ ಮೂಲಕವೇ ಪಾಠವನ್ನು ಗ್ರಹಿಸುತ್ತಾರೆ. ಅವರ ಕಲಿಕೆಯ ಕ್ಷೇತ್ರ ಹಾಗೂ ಮಾರ್ಗವನ್ನು ಮಕ್ಕಳೇ ಆಯ್ದುಕೊಳ್ಳುವ ಈ ವಿನೂತನ ಶಿಕ್ಷಣ ಸದ್ಯಕ್ಕೆ ನಮ್ಮ ಶಾಲೆಯಲ್ಲಿ ಮಾತ್ರವೇ ಇದೆ. ಇಲ್ಲಿ ಎಲ್ಲಾ ವಯಸ್ಸಿನ ಮಕ್ಕಳು ಒಟ್ಟಿಗೆ ಕಲಿಯುತ್ತಾರೆ. ಕಲಿಸುತ್ತಾರ. ಶಿಕ್ಷಕರು ಕೇವಲ ಮಾರ್ಗದರ್ಶಕರಾಗಿರುತ್ತಾರೆ ಅಷ್ಟೇ. ಹೀಗಾಗಿ ಇದು ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ ಶಾಲೆಯಾಗಿದೆ
-ಕಿರಣ್ ಕುಮಾರ್ ಕೆ