ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ನೇರ ಕಾರಣವಾದ ಸಚಿವ ಈಶ್ವರಪ್ಪ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆದಾರ ಹಿಂದೂ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನಿಗೆ ಬರಬೇಕಾದ ಕಾಮಗಾರಿ ಹಣ ಬಂದಿರಲಿಲ್ಲ. ಈ ಬಗ್ಗೆ ಪ್ರಧಾನಿಗೂ ಅವರು ಪತ್ರ ಬರೆದಿದ್ದರೂ ಯಾರು ಸ್ಪಂದಿಸಲಿಲ್ಲ. ವಿಧಿಯಿಲ್ಲದೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಇಡಿ ರಾಜ್ಯ ತಲೆತಗ್ಗಿಸುವ ವಿಷಯವಾಗಿದೆ. ಸರ್ಕಾರದ ನಿರ್ಲಕ್ಷ್ಯವಾಗಿದೆ. ಒಂದು ರೀತಿಯಲ್ಲಿ ಇದು ಕೊಲೆ ಎಂದ ಅವರು, ಇದಕ್ಕೆ ಈಶ್ವರಪ್ಪನವರೇ ನೇರ ಹೊಣೆಯಾಗುತ್ತಾರೆ. ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸ್ವಾಮೀಜಿಗಳು ಸಾಂತ್ವನ ಹೇಳಬೇಕು :
ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದಾಗ ಸ್ವಾಮೀಜಿಗಳು ಸೇರಿದಂತೆ ಎಲ್ಲಾ ಬಿಜೆಪಿ ಮುಖಂಡರು ಆತನ ಮನೆಗೆ ಬಂದು ಸಾಂತ್ವನ ಹೇಳಿದ್ದಾರೆ. ಅದೇ ರೀತಿ ಸಂತೋಷ್ ಪಾಟೀಲ್ ಮನೆಗೂ ಕೂಡ ಬಿಜೆಪಿ ಮುಖಂಡರು, ಸ್ವಾಮೀಜಿಗಳು ಸಾಂತ್ವನ ಹೇಳಬೇಕು. ಆತನ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು. ಪ್ರಕರಣದ ತನಿಖೆಯಾಗಬೇಕು ಎಂದರು.
ರೇಣುಕಾಚಾರ್ಯ, ಯತ್ನಾಳ್‌ರಂತಹ ಮೂರ್ಖರು ಗುತ್ತಿಗೆದಾರನ ಆತ್ಮಹತ್ಯೆಗೆ ಕಾಂಗ್ರೆಸ್ ಕಾರಣ ಎಂದು ಹೇಳುತ್ತಾರೆ. ಯತ್ನಾಳ್ ಕೂಡ ಮನಸ್ಸು ಸರಿಯಿಲ್ಲದವರಂತೆ ಮಾತನಾಡುತ್ತಾರೆ. ರೇಣುಕಾಚಾರ್ಯ ಹುಚ್ಚನಂತೆ ಮಾತನಾಡುತ್ತಾರೆ. ಯತ್ನಾಳ್ ಮತ್ತು ರೇಣುಕಾಚಾರ್ಯ ಇಬ್ಬರೇ ಬಿಜೆಪಿ ಮುಗಿಸಲು ಸಾಕು. ಮೊದ ಮೊದಲು ಈಶ್ವರಪ್ಪ ಮತ್ತು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಯತ್ನಾಳ್ ಇಂದು ಪರವಾಗಿ ಮಾತನಾಡುತ್ತಾನೆ ಎಂದು ಏಕವಚನದಲ್ಲಿಯೇ ಇಬ್ಬರನ್ನು ತರಾಟೆಗೆ ತೆಗೆದುಕೊಂಡರು.
ಸಬ್ ಇನ್ಸ್ಪೆಕ್ಟರ್ ಆಯ್ಕೆಯಲ್ಲಿ ಯುವಕರಿಗೆ ಅನ್ಯಾಯವಾಗಿದೆ. ಇದಕ್ಕೆ ಗೃಹ ಮಂತ್ರಿ ಮತ್ತು ಎಡಿಜಿಪಿ ಕಾರಣರು. ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಬೇಕು ಮತ್ತು ಗೃಹ ಮಂತ್ರಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಸಾಗರದಲ್ಲಿ ಶ್ರೀಪಾದ್ ಹೆಗಡೆ ಎಂಬುವವರ ಮೇಲೆ ಶಾಸಕ ಹಾಲಪ್ಪ ಸೇರಿದಂತೆ ಅವರ ಗುಂಪು ಹಲ್ಲೆ ಮಾಡಿ ನೀಚತನ ಮೆರೆದಿದೆ. ದೂರು ಕೊಟ್ಟರು ಕೂಡ ಇದುವರೆಗೂ ಎಫ್‌ಐಆರ್ ದಾಖಲಿಸಿಲ್ಲ. ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಒ.ಶಿವಕುಮಾರ್, ಮುಖಂಡರಾದ ಜಿತೇಂದ್ರ, ಜಿ.ಡಿ.ಮಂಜುನಾಥ್, ಚಿನ್ಮಯಿ, ರಾಜಶೇಖರ್ ಹಾಜರಿದ್ದರು.