ಜೆಡಿಎಸ್‌ನ ಬಹುನಿರೀಕ್ಷಿತ ಜನತಾ ಜಲಧಾರೆ ಯಾತ್ರೆ ಏ. 21 ರಿಂದ 23 ರವರೆಗೆ ಶಿವಮೊಗ್ಗದಲ್ಲಿ ನಡೆಯಲಿದ್ದು, ತೀರ್ಥಹಳ್ಳಿ ತಾಲೂಕು ಕಮ್ಮರಡಿಯಲ್ಲಿ 21 ರಂದು ಸಮಾವೇಶ ನಡೆಯಲಿದೆ. ಅಲ್ಲಿಂದ ಗಾಜನೂರಿಗೆ ಬರಲಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಶ್ರೀಕಾಂತ್ ಹೇಳಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾನಾಡಿದ ಅವರು, ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಸಾಗುವ ಯಾತ್ರೆ ಏ. 22 ರಂದು ಕೂಡ್ಲಿಗೆ ತೆರಳಲಿದೆ ಅಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಏ.23 ರಂದು ಭದ್ರಾವತಿ ತಾಲೂಕು ಬಿ.ಆರ್.ಪಿಯಲ್ಲಿ ಸಮಾವೇಶ ನಡೆಯಲಿದೆ. ರಾಜ್ಯದಲ್ಲಿ ನೀರಾವರಿಗೆ ಆದ್ಯತೆ ನೀಡುವ ಉದ್ದೇಶದಿಂದ ಪಕ್ಷ ಈ ಯಾತ್ರೆ ಹಮ್ಮಿಕೊಂಡಿದೆ. ಈ ಸಂದರ್ಭ ರಾಜ್ಯ ಹಾಗೂ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುವ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ವರಿಷ್ಟರು ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದ್ದು, ಜನತಾ ಜಲಧಾರೆ ಯಾತ್ರೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ಹೇಳಿದರು.
ಜಲಧಾರೆ ಕಾರ್ಯಕ್ರಮದ ಮುಖ್ಯ ಉದ್ದೇಶ ಅಣೆಕಟ್ಟುಗಳ ಮೂಲಕ ನೀರಿನ ಬರ ಎದುರಿಸುವ ಗ್ರಾಮಗಳಿಗೆ ನೀರು ಹರಿಸುವ ಪಕ್ಷದ ಮಹತ್ವಕಾಂಕ್ಷೆಯನ್ನ ಜನರಿಗೆ ತಿಳಿಸುವುದು ಹಾಗೂ ನೀರು ಪಡೆದುಕೊಳ್ಳುವ ಜನರ ಹಕ್ಕುಗಳನ್ನು ಜಾಗೃತಗೊಳಿಸುವುದು ಈ ಯಾತ್ರೆ ಉದ್ದೇಶವಾಗಿದೆ ಎಂದು ಶ್ರೀಕಾಂತ್ ರವರು ಮಾಹಿತಿ ನೀಡಿದರು.
ವರಿಷ್ಠರ ತೀರ್ಮಾನ
ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಪಕ್ಷ ಯಾರನ್ನೂ ನೇಮಕ ಮಾಡಿಲ್ಲ. ಈ ಹಿಂದೆ ಘೋಷಣೆ ಮಾಡಿದಂತೆ ತಾವೇ ಜೆಡಿಎಸ್ ಅಧಿಕೃತ ಅಧ್ಯಕ್ಷ ಎಂದ ಶ್ರೀಕಾಂತ್ ಅವರು, ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಕ್ಷೇತ್ರದ ವಿಚಾರದಲ್ಲಿಯೂ ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೊ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಭದ್ರಾವತಿ ನಿಯೋಜಿತ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ ಅವರು ಮಾತನಾಡಿ, ಪಕ್ಷದ ವರಿಷ್ಠರ ಸೂಚನೆಯಂತೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಜಲಧಾರೆ ಯಾತ್ರೆ ಸಮಾವೇಶ ಅದ್ದೂರಿಯಾಗಿ ನಡೆಸಲಾಗುವುದು ಎಂದು ಹೇಳಿದರು.
ಕಾರ್ಯಾದ್ಯಕ್ಷ ಕೆ.ಎನ್.ರಾಮಕೃಷ್ಣ, ಮಹಿಳಾ ಘಟಕದ ಅಧ್ಯಕ್ಷತೆ ಗೀತಾ, ಪ್ರಮುಖರಾದ ಕಾಂತರಾಜ್, ಭಾಸ್ಕರ್, ತ್ಯಾಗರಾಜ್, ಸತ್ಯನಾರಾಯಣ, ನಾಗರಾಜ್ ಕಂಕಾರಿ, ಉಮೇಶ್ ಮತ್ತಿತರರು ಭಾಗವಹಿಸಿದ್ದರು.