ಗುತ್ತಿಗೆ ಹಣ ನೀಡದೆ ಸಂಕಷ್ಟಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಬೆಳಗಾವಿಯ ಸಂತೋಷ್ ಪಾಟೀಲ್ ಕುಟುಂಬಕ್ಕೆ ಶಿವಮೊಗ್ಗ ವೀರಶೈವ ಸಮಾಜದಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ಸಮಾಜದ ಪ್ರಮುಖರು ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೀರಶೈವ ಲಿಂಗಾಯತ ಸಮಾಜದ ಪ್ರಮುಖರಾದ ಎಸ್.ಪಿ.ದಿನೇಶ್ ಮಾತನಾಡಿ, ಸುಮಾರು ನಾಲ್ಕು ಕೋಟಿ ರೂ.ವೆಚ್ಚದ ಕಾಮಗಾರಿಯನ್ನು ಮಾಡಿದ್ದ ಸಂತೋಷ್ ಪಾಟೀಲ್ ಬಿಲ್‌ಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು, ಅಧಿಕಾರಿಗಳು ಮಾತ್ರವಲ್ಲದೆ ಪ್ರಧಾನಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೂ ಪತ್ರ ಬರೆದು ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರೂ ಸಂತೋಷ್ ಪಾಟೀಲ್‌ಗೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಸಹಾಯ ಮಾಡಿಲ್ಲ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ ಮತ್ತು ಚಿಕ್ಕ ಮಗು ಅನಾಥವಾಗಿವೆ. ಸಂತೋಷ್ ಮಾಡಿರುವ ಸಾಲ ಇದೆ. ಹೀಗಾಗಿ ನೊಂದ ಜೀವಕ್ಕೆ ನೆರವು ನೀಡುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ವೀರಶೈವ ಸಮಾಜದ ಮುಖಂಡರು ಸಭೆ ನಡೆಸಿ ನೊಂದ ಕುಟುಂಬಕ್ಕೆ ನೆರವು ನೀಡಲು ತೀರ್ಮಾನಿಸಲಾಗಿದೆ. ಏ.23 ರಂದು ಬೆಳಗಾವಿಯ ಸಂತೋಷ್ ಪಾಟೀಲ್ ಮನೆಗೆ ಸಮಾಜಬಾಂಧವರಿಂದ ಸಂಗ್ರಹವಾಗುವ ದೇಣಿಗೆಯನ್ನು ಹಸ್ತಾಂತರಿಸಲಾಗುವುದು ಎಂದರು.
ಸಮಾಜದ ಕುಟುಂಬವೊಂದು ಸಂಕಷ್ಟದಲ್ಲಿದ್ದು, ಸಮಾಜಬಾಂದವರು ನೆರವು ನೀಡುವುದು ಧರ್ಮದ ಕೆಲಸ, ಸಂತೋಷ್ ಸಾವಿಗೆ ಶಿವಮೊಗ್ಗದ ರಾಜಕೀಯ ನಾಯಕರೇ ಕಾರಣ ಎಂದು ಸಾರ್ವಜನಿಕ ಮತ್ತು ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ. ಈ ವಿಚಾರದ ಸತ್ಯಾಸತ್ಯತೆ ಏನೇ ಇರಲಿ ಶಿವಮೊಗ್ಗ ಜಿಲ್ಲೆಯ ವೀರಶೈವ ಸಮಾಜ ಬಾಂಧವರು ಸಂತೋಷ್ ಕುಟುಂಬಕ್ಕೆ ನೆರವು ನೀಡಲು ಮುಂದಾಗಿದ್ದಾರೆ ಇಲ್ಲಿ ಪಕ್ಷ ಮತ್ತು ರಾಜಕೀಯ ಸಂಬಂಧವಿಲ್ಲ ಎಂದು ಹೇಳಿದರು
.ಮತ್ತೊಬ್ಬ ಮುಖಂಡ ಷಡಾಕ್ಷರಿ ಅವರು ಮಾತನಾಡಿ, ಪ್ರಧಾನಿ ಬರುವರೆಂಬ ಕಾರಣಕ್ಕೆ ಶಿವಮೊಗ್ಗ ತಾಲೂಕು ಹೊಳಲೂರಿನಲ್ಲಿ ಲಕ್ಷಾಂತರ ರೂ. ಕಾಮಗಾರಿಯನ್ನು ಯಾವುದೇ ಟೆಂಡರ್ ಮತ್ತು ಕಾರ್ಯಾಧೇಶ ಇಲ್ಲದೆ ಮಾಡಲಾಗಿದೆ. ಅದೇ ರೀತಿ ಸಂತೋಷ್ ಕೂಡಾ ಊರಿನ ಜಾತ್ರೆ ಎಂಬ ಕಾರಣಕ್ಕೆ ಸಾಲಸೋಲ ಮಾಡಿ ಕಾಮಗಾರಿ ಮಾಡಿದ್ದರು. ಬಿಲ್‌ಗಾಗಿ ಕೇಂದ್ರ ಸರಕಾರದವರೆಗೆ ಪತ್ರ ಬರೆದಿದ್ದರು, ಹತ್ತಾರು ಬಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ ೪೦% ಕಮೀಷನ್ ಕಾರಣಕ್ಕೆ ಆತನನ್ನು ಸತಾಯಿಸಿದ್ದರಿಂದ ದಿಕ್ಕುತೋಚದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಸಾವಿಗೆ ನ್ಯಾಯ ಸಿಗಬೇಕು. ರಾಮ -ಹನುಮ ಎಂದು ಹೇಳುವ ಬಿಜೆಪಿಯವರು ಮಾಡುವುದೆಲ್ಲಾ ಅನ್ಯಾಯವೇ ಆಗಿದೆ ಎಂದು ಟೀಕಿಸಿದರು.
ಎಚ್.ಎಂ.ಯೋಗೇಶ್ ಮಾತನಾಡಿ, ಸಮಾಜ ಬಾಂಧವರಿಗೆ ನೆರವು ನೀಡಲು ಕೋರಲಾಗಿದೆ. ಸಾರ್ವಜನಿಕವಾಗಿಯೂ ಈ ವಿಚಾರವನ್ನು ಪ್ರಚಾರ ಮಾಡಿ ನಿಗದಿತ ಸ್ಥಳಗಳಲ್ಲಿ ಹುಂಡಿ ಇಡಲಾಗುವುದು ಸಂಗ್ರಹವಾದ ಹಣವನ್ನು ಕುಟುಂಬಕ್ಕೆ ನೀಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸುಧೀರ್, ವೀರಮ್ಮ, ಗಿರೀಶ್ ಇದ್ದರು.
ಸಂತೋಷ್ ಸಾವಿನ ತನಿಖೆ ಪ್ರಾಮಾಣಿಕವಾಗಿ ಆಗಬೇಕು. ಸರಕಾರ ಸಂತೋಷ್ ಪತ್ನಿಗೆ ಸರಕಾರಿ ನೌಕರಿ ನೀಡಬೇಕು. ಕುಟುಂಬಕ್ಕೆಕನಿಷ್ಟ 5 ಕೋಟಿ ರೂ. ನೆರವು ನೀಡಬೇಕು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೀರಶೈವರ ಬೆಂಬಲದಿಂದ ನಾಲು ಬಾರಿಮುಖ್ಯಮಂತ್ರಿ ಆಗಿದ್ದಾರೆ. ಅವರು ಸಂತೋಷ್ ಕುಟುಂಬಕ್ಕೆ ಸಾಂತ್ವನ ಹೇಳಬೇಕು ಮತ್ತು ಸರಕಾರದಿಂದ ನೆರವು ಕೊಡಿಸಬೇಕು
–ಎಸ್.ಪಿ.ದಿನೇಶ್, ವೀರಶೈವ ಸಮಾಜದ ಮುಖಂಡ