Malenadu Mitra
ರಾಜ್ಯ ಶಿವಮೊಗ್ಗ ಸೊರಬ

ಬಿಜೆಪಿಯಿಂದ ಕೋಮು ಸಂಘರ್ಷ, ನೆಲಕಚ್ಚಿದ ಆಡಳಿತ

ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸುವ ಬದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಈಶ್ವರಪ್ಪ ಅವರಿಗೆ ರಕ್ಷಣೆ ನೀಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ.ಮೋಹನ್ ಆರೋಪಿಸಿದರು.
ಸೊರಬ ಪಟ್ಟಣದ ಬಂಗಾರಧಾಮದಲ್ಲಿ ಸೋಮವಾರ ಸಂಜೆ ಕರೆದಿದ್ದ ಬ್ಲಾಕ್ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಎಲ್ಲಾ ವಿಷಯಗಳಲ್ಲೂ ಕೋಮು ಸಂಘರ್ಷಕ್ಕೆ ಬಿಜೆಪಿ ಅವಕಾಶ ಒದಗಿಸುತ್ತಿದೆ. ರಾಜ್ಯದಲ್ಲಿ ಶೇ. ೪೦ರ ಸರಕಾರ ಆಡಳಿತ ಇರುವುದು ಗುತ್ತಿಗೆದಾರ ಸಂತೋಷ ಪಾಟೀಲ್ ಅವರ ಆತ್ಮಹತ್ಯೆ ನಂತರ ಪ್ರತಿಯೊಬ್ಬರಿಗೂ ಅರಿವಿಗೆ ಬಂದಿದೆ. ಸಂತೋಷ್ ಪಾಟೀಲ್ ಅವರು ಆತ್ಮಹತ್ಯೆಗೂ ಮುನ್ನ ಸ್ಪಷ್ಟ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲ ನೀಡಿದ್ದಾರೆ. ಈ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ಪಾತ್ರ ಇರುವುದು ಜನತೆಗೆ ತಿಳಿದಿದೆ. ಈವರೆಗೂ ಈಶ್ವರಪ್ಪ ಅವರ ಬಂಧನವಾಗಿಲ್ಲ. ಸಂತೋಷ ಪಾಟೀಲ್ ಅವರ ಕುಟುಂಬ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ರಾಜ್ಯ ಸರಕಾರದ ಯಾವುದೇ ಪ್ರತಿನಿಧಿಗಳು ಅವರ ಕುಟುಂಬವನ್ನು ಭೇಟಿ ಸಹ ಮಾಡಿಲ್ಲ. ಈ ನಿಟ್ಟಿನಲ್ಲಿ ಈಶ್ವರಪ್ಪ ಅವರ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕೇಂದ್ರದಲ್ಲಿ ಏ.೨೩ರಂದು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಲಂಚಾವತಾರ, ಬೆಲೆ ಏರಿಕೆ, ಕೋಮುವಾದ ಹೆಚ್ಚಾಗಿದೆ. ರಾಜ್ಯ ಸರಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇನ್ನೂ ಕೆಲವು ಸಚಿವರು ಹಾಗೂ ಶಾಸಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಈ ಬಗ್ಗೆ ಗುತ್ತಿಗೆದಾರರು ಮತ್ತು ಆಯಾ ಇಲಾಖೆಯ ಅಧಿಕಾರಿಗಳು ಸರಕಾರಕ್ಕೆ ಪತ್ರವನ್ನು ಬರೆದಿದ್ದಾರೆ ಎಂದ ಅವರು, ಸೊರಬ ಸಮಾಜವಾದಿ ಸಿದ್ಧಾಂತದ ಹೋರಾಟದ ಭೂಮಿಯಾಗಿದೆ. ಈ ಭಾಗದಿಂದ ಆರಂಭವಾದ ಎಲ್ಲಾ ಹೋರಾಟಗಳು ಯಶಸ್ವಿಯಾಗಿವೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಕಾಲದಿಂದಲೂ ಹಲವಾರು ಹೋರಾಟಗಳಿಗೆ ಇಲ್ಲಿನ ನೆಲ ಸಾಕ್ಷಿಯಾಗಿದೆ. ಆದ್ದರಿಂದ ಜನ ವಿರೋಧಿ ರಾಜ್ಯ ಸರ್ಕಾರದ ಆಡಳಿತವನ್ನು ವಿರೋಧಿಸಿ ಹಮ್ಮಿಕೊಂಡಿರುವ ಹೋರಾಟದಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್, ಸೊರಬ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಆರ್.ಸಿ.ಪಾಟೀಲ್ ಮಾತನಾಡಿದರು.
ಮಹಿಳಾ ಘಟಕದ ಅಧ್ಯಕ್ಷರಾದ ಸುಜಾತಾ ಜೋತಾಟಿ, ವಿಶಾಲಾಕ್ಷಿ, ಜಿ.ಪಂ ಮಾಜಿ ಸದಸ್ಯರಾದ ತಬಲಿ ಬಂಗಾರಪ್ಪ, ಶಿವಲಿಂಗೇಗೌಡ, ಗ್ರಾ.ಪಂ ಸದಸ್ಯ ನಿರಂಜನಮೂರ್ತಿ ದೇವತಿಕೊಪ್ಪ, ಪುರಸಭೆ ಸದಸ್ಯೆ ಶ್ರೀರಂಜನಿ, ಪ್ರಮುಖರಾದ ಎಚ್. ಗಣಪತಿ, ಕೆ. ಮಂಜುನಾಥ ಹಳೇಸೊರಬ, ನಾಗರಾಜ ಚಿಕ್ಕಸವಿ, ಅಶೋಕ ಬರದವಳ್ಳಿ, ಸಂಜೀವ ನೇರಲಗಿ, ಆರ್.ಟಿ. ಮಂಜುನಾಥ್, ನಿರಂಜನ ದೇವತಿಕೊಪ್ಪ, ರತ್ನಮ್ಮ ಮತ್ತಿತರರಿದ್ದರು.
೧೯ಎಸ್‌ಆರ್‌ಬಿಪಿ೧: ಸೊರಬ ಪಟ್ಟಣದ ಬಂಗಾರಧಾಮದಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ.ಮೋಹನ್ ಮಾತನಾಡಿದರು.

Ad Widget

Related posts

ನೂತನ ಕುಲಸಚಿವರಿಂದ ಅಧಿಕಾರ ಸ್ವೀಕಾರ

Malenadu Mirror Desk

ಶಿವಮೊಗ್ಗದಲ್ಲಿ ತಗ್ಗಿದ ಕೊರೊನ, 5 ಸಾವು, 197 ಸೋಂಕು

Malenadu Mirror Desk

ಮಹಿಳೆ ಕೊಲೆ ಮಾಡಿ 35 ಲಕ್ಷ ಲಟಪಾಯಿಸಿದ ಗ್ಯಾಂಗ್ ಅಂದರ್, ಚಾಲಕನಾದರೂ ಮಗನಂತೆ ನೋಡಿಕೊಂಡ ಮನೆಯೊಡತಿಯನ್ನೇ ಕೊಲೆಮಾಡಿದ ಪಾತಕಿಗಳು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.