Malenadu Mitra
ರಾಜ್ಯ ಶಿವಮೊಗ್ಗ

ಮಲೆನಾಡಿನ ಭೂಮಿ ಸಮಸ್ಯೆ ಬಗ್ಗೆ ಮೇ ಮೊದಲ ವಾರದಲ್ಲಿ ಸಭೆ, ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ

ಮಲೆನಾಡು ಭಾಗದ ಅರಣ್ಯ ಭೂಮಿ ಸಮಸ್ಯೆ ಬಗೆಹರಿಸಲು ಮೇ ಮೊದಲ ವಾರದಲ್ಲಿ ಸಭೆ ನಡೆಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೇ ಮೊದಲ ವಾರದಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿಶೇಷ ಸಭೆಯನ್ನು ಕರೆಯಲಾಗುವುದು. ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶದ ಅರಣ್ಯ ಭೂಮಿಯ ಒತ್ತುವರಿಯನ್ನು ಬಗೆಹರಿಸಲು ಮತ್ತು ಅರಣ್ಯ ಒತ್ತುವರಿ ಸ್ಪಷ್ಟನೆ ಹಾಗೂ ಕಾನೂನು ಬದಲಾವಣೆ ತರಲು ೪-೫ ಜಿಲ್ಲೆಯ ಜನಪ್ರನಿಧಿಗಳು ಮತ್ತು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದು, ಈ ಸಭೆಯಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು ಮತ್ತು ಕೆಲವೊಂದಕ್ಕೆ ತಕ್ಷಣ ಪರಿಹಾರ ನೀಡಲಾಗುವುದು ಎಂದರು.
ಪರ್ಸಂಟೇಜ್ ನಿಯಂತ್ರಣಕ್ಕೆ ೫೦ ಕೋಟಿ ರೂ.ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡುವ ಸಲುವಾಗಿ ಶೀಘ್ರದಲ್ಲೇ ಉನ್ನತಮಟ್ಟದ ಆಯೋಗ ರಚಿಸಲಾಗುವುದು. ಈ ಉನ್ನತ ಮಟ್ಟದ ಆಯೋಗವು ಕಾಮಗಾರಿಯ ರೂಪುರೇಷೆ ಬಗ್ಗೆ ಪರಿಶೀಲನೆ ನಡೆಸಿ ೫೦ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಲಿದೆ. ಒಂದು ವೇಳೆ ಮೌಖಿಕ ಆದೇಶದ ಮೇಲೆ ಕಾಮಗಾರಿಗಳು ನಡೆದರೆ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪಿಡಿಓ ಹಾಗೂ ಇಓ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಒತ್ತಡ ಹೆಚ್ಚಾದಲ್ಲಿ ಜಿಲ್ಲಾಮಟ್ಟದ ಸಮಿತಿಯನ್ನು ರಚಿಸಲು ಪ್ರಯತ್ನಿಸಲಾಗುವುದು ಎಂದರು.
ತೆರಿಗೆ ಸಂಗ್ರಹ ಹೆಚ್ಚಳವಾಗುತ್ತಿರುವುದರಿಂದ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ತೆರಿಗೆ ಸಂಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ೧೫ ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ತೆರಿಗೆ ಸಂಗ್ರಹ ಹೆಚ್ಚಳವಾಗಿರುವುದರಿಂದ ಕೇಂದ್ರ ಸರ್ಕಾರವು ಸಹ ಹೆಚ್ಚಿನ ಅನುದಾನ ನೀಡಿದೆ. ಕರ್ನಾಟಕ ಉದಯವಾದ ನಂತರ ಇದೇ ಪ್ರಥಮ ಬಾರಿಗೆ ತೆರಿಗೆ ಹೆಚ್ಚಳವಾಗಿರುವುದು ದಾಖಲೆಯಾಗಿದೆ ಎಂದರು.
ಬೆಂಗಳೂರು ಹೊರತುಪಡಿಸಿ ಐಟಿ-ಬಿಟಿ ಕ್ಷೇತ್ರ ಬೆಳೆಯುವ ಅವಕಾಶ ಶಿವಮೊಗ್ಗ ಜಿಲ್ಲೆಗೆ ಇದ್ದು, ಇದಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಮಗ್ರ ಕರ್ನಾಟಕದ ಅಭಿವೃದ್ಧಿಯಾಗಬೇಕು. ಎಲ್ಲಾ ಭಾಗದ ಅಭಿವೃದ್ಧಿಯಾಗಬೇಕೆಂಬುದು ನಮ್ಮ ಚಿಂತನೆಯಾಗಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ಶೇ.೭೫ ರಷ್ಟು ಯೋಜನೆಗಳ ಅನುಷ್ಟಾನಕ್ಕೆ ಆದೇಶ ನೀಡಲಾಗಿದೆ. ಒಟ್ಟಾರೆಯಾಗಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ತೀವ್ರ ಆಸಕ್ತಿ ಹಾಗೂ ಬದ್ಧತೆ ಹೊಂದಿದೆ ಎಂದರು.
ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಖಾಸಗೀಕರಣಗೊಂಡಲ್ಲಿ ಕಾರ್ಖಾನೆಗೆ ಬಿಟ್ಟು ಉಳಿದ ಜಾಗವನ್ನು ಬೇರೆ ಕಾರ್ಖಾನೆಗಳಿಗೆ ಉಪಯೋಗಿಸಲಾಗುವುದು ಮತ್ತು ಎಂಪಿಎಂ ಕಾರ್ಖಾನೆಯನ್ನು ಪುನಃ ಆರಂಭಿಸಲು ಟೆಂಡರ್ ಕರೆಯಲಾಗಿದ್ದು, ಇದುವರೆಗೂ ಯಾರು ಟೆಂಡರ್ ಹಾಕದಿರುವುದರಿಂದ ಮುಂದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಗಟ್ಟಿಯಾಗಿದೆ. ಇನ್ನಷ್ಟು ಗಟ್ಟಿಗೊಳಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಅಭಿವೃದ್ಧಿ ಬಗ್ಗೆ ಚರ್ಚೆ ನಡೆದಿದೆ. ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿರುವುದರಿಂದ ಚುರುಕುಗೊಳಿಸಲಾಗುವುದು ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮುಖಂಡರಾದ ಎಸ್.ದತ್ತಾತ್ರಿ, ಬಿ.ಕೆ.ಶ್ರೀನಾಥ್, ಕೆ.ವಿ.ಅಣ್ಣಪ್ಪ, ಋಷಿಕೇಶ್ ಪೈ ಉಪಸ್ಥಿತರಿದ್ದರು.

Ad Widget

Related posts

ಮಲೆನಾಡಿನಲ್ಲಿ ಸಂಭ್ರಮದ ಗೌರಿಹಬ್ಬ

Malenadu Mirror Desk

ಶಿವಮೊಗ್ಗದಲ್ಲೂ ಬೀದಿಗಿಳಿದ ರೈತರು

Malenadu Mirror Desk

ರೌಡಿಶೀಟರ್ ಹತ್ಯೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.