ಶಂಕರಘಟ್ಟ, ಏ. 30: ಕುವೆಂಪು ವಿವಿಯ 32ನೇ ವಾರ್ಷಿಕ ಘಟಿಕೋತ್ಸವವನ್ನು ಮೇ ತಿಂಗಳಿನಲ್ಲಿ ಆಯೋಜಿಸಲು ಸಿದ್ಧತೆ ನಡೆಸಿದ್ದು, ರೆಗ್ಯುಲರ್ ಹಾಗೂ ದೂರಶಿಕ್ಷಣ ಅಭ್ಯರ್ಥಿಗಳಿಂದ ಘಟಿಕೋತ್ಸವ ಪ್ರಮಾಣಪತ್ರ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಮಾರ್ಚ್ 2021ರ ನಂತರದ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಮತ್ತು ಆಗಸ್ಟ್ 2021ರ ನಂತರ ನಡೆದ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ದೂರಶಿಕ್ಷಣ ಅಭ್ಯರ್ಥಿಗಳಿಗೆ 32ನೇ ಘಟಿಕೋತ್ಸವದಡಿ ಪದವಿ ಪ್ರಮಾಣಪತ್ರಗಳನ್ನು ನೀಡಲಾಗುವುದು.
ಘಟಿಕೋತ್ಸವ ಕಾರ್ಯಕ್ರಮದಲ್ಲಿ ಈ ವರ್ಷಗಳ ಪರೀಕ್ಷೆಗಳಲ್ಲಿ ರ‍್ಯಾಂಕ್ ಪಡೆದ ಅಭ್ಯರ್ಥಿಗಳಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. ಮೇಲ್ಕಂಡ ವರ್ಷಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪರೀಕ್ಷೆ ಶುಲ್ಕದ ಜೊತೆಗೆ ಘಟಿಕೋತ್ಸವ ಶುಲ್ಕ ಪಾವತಿಸಿದ್ದಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ.
ಉಳಿದಂತೆ ಹಿಂದಿನ ವರ್ಷಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಪದವಿಪ್ರಮಾಣ ಪತ್ರದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು.
ಪಿಹೆಚ್.ಡಿ. ಪದವೀಧರರು ಅರ್ಜಿಯನ್ನು ನೇರವಾಗಿ ವಿವಿಯ ವೆಬ್‌ಸೈಟ್‌ನಲ್ಲಿ (www.kuvempu.ac.in) ಆನ್‌ಲೈನ್ ಮೂಲಕ ಸಲ್ಲಿಸಬಹುದು. ವೆಬ್‌ಸೈಟ್‌ನಲ್ಲಿ ಎಕ್ಸಾಮಿನೇಶನ್ ಆಯ್ಕೆ ಬಳಸಿ ಕಾನ್ವೊಕೇಶನ್ ಅಪ್ಲಿಕೇಶನ್ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು.
ರ‍್ಯಾಂಕ್ ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣ ಪತ್ರಗಳನ್ನು ಆಯಾ ವಿಭಾಗ, ಕಾಲೇಜು, ಮತ್ತು ದೂರಶಿಕ್ಷಣ ಅಧ್ಯಯನ ಕೇಂದ್ರಗಳಿಗೆ ಕಳುಹಿಸಿಕೊಡಲಾಗುವುದು ಎಂದು ವಿವಿ ಪರೀಕ್ಷಾಂಗ ವಿಭಾಗದ ಪ್ರಕಟಣೆ ತಿಳಿಸಿದೆ.