ವಿಜಯಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿಯಾಗಲು 2500 ಕೋಟಿ ರೂ ಕೊಡುವಂತೆ ಪಕ್ಷದ ನಾಯಕರು ಕೇಳಿದ್ದರು ಎಂದಿರುವುದು ಗಂಭೀರ ವಿಚಾರ. ಹೈಕಮಾಂಡ್ ಈ ಬಗ್ಗೆ ಯಾವ ರೀತಿಯ ಕ್ರಮ ಜರುಗಿಸಬೇಕೆನ್ನುವುದನ್ನು ಯೋಚಿಸುತ್ತಿದೆ. ಸದ್ಯದಲ್ಲೇ ಅವರ ವಿರುದ್ಧ್ದ ಕ್ರಮವಾಗಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ಅವರು ತಮ್ಮ ಹೇಳಿಕೆಯಲ್ಲಿ ಹಣ ಕೊಡುವಂತೆ ಒತ್ತಡ ಹಾಕಿದ ನಾಯಕರ ಹೆಸರು ಹೇಳಿಲ್ಲ. ಇನ್ನಾದರೂ ಹೇಳಲಿ ಎಂದ ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯ ಸರಕಾರದ ವಿರುದ್ದ ಸತತವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಾ ತಿರುಗುತ್ತಿದ್ದಾರೆ. ಆದರೆ ಇದರಲ್ಲಿ ಹುರುಳಿಲ್ಲ ಎಂದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ನೈತಿಕತೆ ಉಳಿಸಿಕೊಂಡಿಲ್ಲ. ಅವರು ಅಧಿಕಾರದ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ಈ ರೀತಿ ಆರೋಪ ಮಾಡುತ್ತಾ ಪ್ರತಿಭಟಿಸುತ್ತಿದ್ದಾರೆ. ಚುನಾವಣೆಯ ವರ್ಷವಾಗಿರುವುದರಿಂದ ಇಂತಹ ಆರೋಪಗಳು ಸಹಜ ಎನ್ನುತ್ತಾ ಬಿಜೆಪಿಯ ಕಮಿಷನ್, ಭ್ರಷ್ಟಾಚಾರವನ್ನು ತಳ್ಳಿಹಾಕಿದರು.
ಶಿವಮೊಗ್ಗ ಶಾಂತಯುತ ಜಿಲ್ಲೆಯಾಗಿದೆ. ಇಲ್ಲಿ ಹಿಂದು ಮುಸ್ಲಿಮರು ಸಹೋದರರಂತಿದ್ದರು. ಆದರೆ ಕೆಲವು ದುಷ್ಟರು ಬೆಂಕಿ ಹಾಕಲು ಯತ್ನಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದ ಅವರು, ನೀವು ಯಡಿಯೂರಪ್ಪ ಅವರ ಉತ್ತರಾಧಿಕಾರಿಯೇ ಎಂಬ ಪ್ರಶ್ನೆಗೆ ಇದನ್ನು ಪಕ್ಷ ನಿರ್ಧರಿಸುತ್ತದೆ. ಸದ್ಯಕ್ಕೆ ನನಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷನನ್ನಾಗಿ ಮಾಡಿದೆ. ಅದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.