ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯ ವಿರೋಧಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಮೇ.10ರಂದು ಶಿವಮೊಗ್ಗ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಾವಿರಾರು ಜನರು ಭಾಗಿಯಾಗಲಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಅಶೋಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗುತ್ತದೆ. ಬಿ.ಹೆಚ್. ರಸ್ತೆ, ನೆಹರೂ ರಸ್ತೆ, ಗೋಪಿ ವೃತ್ತದ ಮೂಲಕ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಭೋವಿ ಸಮುದಾಯ ಭವನದ ಮುಂದಿನ ರಸ್ತೆಯಲ್ಲಿ ಸುಮಾರು 2 ಗಂಟೆ ಕಾಲ ಬಹಿರಂಗ ಸಭೆ ನಡೆಸಲಾಗುತ್ತದೆ ಎಂದರು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ ಸೇರಿದಂತೆ ಹಲವು ರಾಜ್ಯ ಮುಖಂಡರು, ಪಕ್ಷದ ಜಿಲ್ಲೆಯ ಎಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಬ್ಲಾಕ್ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಭೆಗೆ ಆಹ್ವಾನಿಸಲಾಗಿದೆ. ಇದು ಜಿಲ್ಲಾ ಮಟ್ಟದ ಕೊನೆಯ ಸಮಾವೇಶವಾಗಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಡಿಜಿಟಲ್ ಸದಸ್ಯತ್ವ ಅಭಿಯಾನದ ಮೂಲಕ ಈಗಾಗಲೇ 1.58 ಲಕ್ಷ ಸದಸ್ಯತ್ವ ಮಾಡಲಾಗಿದೆ. ಸದಸ್ಯತ್ವವನ್ನು 3 ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಪಕ್ಷದತ್ತ ಭಾರೀ ಒಲವು ಮೂಡುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಸ್ಪಂದನೆ ಇದೆ ಎಂದು ಮಧುಬಂಗಾರಪ್ಪ ಹೇಳಿದರು.
ಶೇ. 40ರ ಕಮಿಷನ್ ಸರ್ಕಾರ ಎಂಬ ಆರೋಪ ಈ ಸರ್ಕಾರದ ಮೇಲಿದೆ. ಪಿಎಸ್‌ಐ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಇದು ರಾಜ್ಯದಲ್ಲಿ ನಡೆದ ದೊಡ್ಡ ಹಗರಣವಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳವಾಗುತ್ತಿದ್ದು, ಬಡವರ ಬದುಕು ಇನ್ನಷ್ಟು ಶೋಚನೀಯವಾಗುತ್ತಿದೆ. ದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇದೆಲ್ಲವನ್ನು ಜನರ ಮುಂದಿಟ್ಟು ಸಮಾವೇಶ ನಡೆಸಲಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಶಾಸಕ ಆರ್. ಪ್ರಸನ್ನಕುಮಾರ್, ಮುಖಂಡರಾದ ಎನ್. ರಮೇಶ್, ಕಲಗೋಡು ರತ್ನಾಕರ್, ಎನ್. ರವಿಕುಮಾರ್, ವಿಜಯಕುಮಾರ್ , ಜಿ.ಡಿ.ಮಂಜುನಾಥ್ ,ರಾಜಪ್ಪ ಮತ್ತಿತರರಿದ್ದರು
ಪಿಎಸ್ಐ ನೇಮಕಾತಿ ಹಗರಣದಿಂದ ಯುವಜನರಿಗೆ ಈ ಸರಕಾರದ ಮೇಲೆ ಭರವಸೆ ಇಲ್ಲವಾಗಿದೆ. ವಿದ್ಯಾವಂತರ ಭವಿಷ್ಯದ ಜತೆ ಚೆಲ್ಲಾಟವಾಡುವ ಬಿಜೆಪಿ, ಸರಕಾರಿ ನೌಕರಿಗಳನ್ನು ಹಣಕ್ಕೆ ಬಿಕರಿ ಇಟ್ಟಿರುವುದು ಅದರ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಯುವಜನರು ಇದನ್ನು ಪ್ರಶ್ನೆ ಮಾಡಬೇಕಿದೆ
–ಮಧುಬಂಗಾರಪ್ಪ, ಕೆಪಿಸಿಸಿ ಉಪಾಧ್ಯಕ್ಷ