Malenadu Mitra
ರಾಜ್ಯ ಶಿವಮೊಗ್ಗ

ಆ. ೯ರಿಂದ ಜಿಲ್ಲೆಯಲ್ಲಿ ಬಗರ್‌ಹುಕುಂಗಾಗಿ ಹೋರಾಟ , ಕಾಗೋಡು ಮಾದರಿಯ ಚಳವಳಿಗೆ ಡಿಕೆಶಿ ಕರೆ

ಶಿವಮೊಗ್ಗ: ಕ್ವಿಟ್ ಇಂಡಿಯಾ ಚಳವಳಿಯ ದಿನವಾದ ಆಗಸ್ಟ್ ೯ ರಂದು ರೈತರ ಜಮೀನು ಉಳಿಸಲು ಶಿವಮೊಗ್ಗ ಜಿಲ್ಲೆಯಲ್ಲಿ ಬೃಹತ್ ಹೋರಾಟ ಆರಂಭಿಸಲಾಗುವುದು. ಕಾಗೋಡು ಚಳವಳಿ ಮಾದರಿಯಲ್ಲಿ ಈ ಹೋರಾಟ ನಡೆಯಲಿದೆ. ಇದರಲ್ಲಿ ರಾಜ್ಯಮಟ್ಟದ ನಾಯಕರು ಪಾಲ್ಗೊಳ್ಳುವರು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.
ರಾಜ್ಯ ಸರಕಾರದ ಭ್ರಷ್ಟಾಚಾರ, ನೇಮಕಾತಿ ಅವ್ಯವಹಾರ, ಶೇ. ೪೦ರಷ್ಟು ಕಮಿಷನ್ ಮೊದಲಾದ ವಿಚಾರಗಳ ವಿರುದ್ಧ ಇಲ್ಲಿನ ಬಾಲರಾಜ್ ಅರಸ್ ರಸ್ತೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಲೂ ಎಲ್ಲಾ ಇಲಾಖೆಯಲ್ಲೂ ನೇಮಕಾತಿ ನಡೆದಿದೆ. ಆದರೆ ಒಬ್ಬರಿಂದಲೂ ಸರಕಾರ ಲಂಚ ಪಡೆದಿಲ್ಲ. ತಾನೇ ಸಚಿವನಾಗಿದ್ದ ಇಂಧನ ಇಲಾಖೆಯಲ್ಲಿ ಇಂಜಿನಿಯರ್‌ಗಳನ್ನು ನೇಮಕ ಮಾಡಲಾಯಿತು. ಒಬ್ಬರಿಂದಲೂ ಹಣ ಪಡೆದಿಲ್ಲ. ಶುದ್ಧ ಸರಕಾರ ಕಾಂಗ್ರೆಸ್‌ನದ್ದಾಗಿತ್ತು ಆದರೆ ಈಗಿನ ಸರಕಾರದಲ್ಲಿ ಹುದ್ದೆಗೆ ಇಂತಿಷ್ಟು ಎಂದು ದರ ಫಿಕ್ಸ್ ಮಾಡಲಾಗಿದೆ ಎಂದರು.
ಬಿಜೆಪಿ ಎಲ್ಲಾ ಕಡೆ ಕಪ್ಪು ಚುಕ್ಕೆ ಅಂಟಿಸಿಕೊಂಡಿದೆ. ಈಶ್ವರಪ್ಪ ಶಿವಮೊಗ್ಗಕ್ಕೆ ಕಪ್ಪು ಚುಕ್ಕೆ ಅಂಟಿಸಿದ್ದಾರೆ. ಶೇ. ೪೦ರ ಕಮಿಷನ್ ಹಗರಣದಲ್ಲಿ ಈಶ್ವರಪ್ಪ ವಿರುದ್ದ ಆರೋಪ ಬಂದಾಗ ಅವರು ರಾಜಿನಾಮೆ ಕೊಡಲಿಲ್ಲ ಅವರ ಸಂಪುಟದವರೇ ಅವರನ್ನು ರಕ್ಷಿಸಲು ಯತ್ನಿಸಿದರು. ಆತ್ಮಹತ್ಯೆ ಮಾಡಿಕೊಂಡ ಸಂತೋಷ ಪಾಟೀಲ್ ಸಹೋದರ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಶೇ. ೪೦ರಷ್ಟು ಕಮಿಷನ್‌ಗಾಗಿ ಪೀಡಿಸಿದರು. ಕೆಲಸ ಮಾಡಿದರೂ ಬಿಲ್ ಪಾಸು ಮಾಡಲಿಲ್ಲ ಎಂದು ದೂರಿದ್ದರು. ಆದರೆ ಪೊಲೀಸರು ಆತ್ಮಹತ್ಯೆ ಕೇಸು ದಾಖಲಿಸಿಕೊಂಡರೇ ವಿನಾ ಭ್ರಷ್ಟಾಚಾರ ತಡೆ ಕೇಸನ್ನು ದಾಖಲಿಸಲಿಲ್ಲ. ಗೃಹ ಸಚಿವ ಮತ್ತು ಮುಖ್ಯಮಂತ್ರಿ ಇವರನ್ನು ಸಮರ್ಥವಾಗಿ ರಕ್ಷಿಸಲು ಯತ್ನಿಸಿದರು ಎಂದು ಆರೋಪಿಸಿದರು.


ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ಭ್ರಷ್ಟ ರಾಜ್ಯವಾಗಿದೆ. ಇದನ್ನು ಅಳಿಸಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಮತದಾರರು ಈ ಬಗ್ಗೆ ಈಗಾಗಲೇ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಪರ ವಾತಾವರಣ ಕಂಡುಬರುತ್ತಿದೆ. ೧೫೦ ಸ್ಥಾನ ಗೆಲ್ಲುವ ಗುರಿ ತಮ್ಮದಾಗಿದೆ ಎಂದ ಶಿವಕುಮಾರ್, ಭ್ರಷ್ಟಾಚಾರ ಮಾಡಿದವರು ಯಾರೇ ಆದರೂ ಮುಖ್ಯಮಂತ್ರಿ ಅವರನ್ನು ಕಿತ್ತೊಗೆಯಬೇಕಿತ್ತು. ಅವರನ್ನು ರಕ್ಷಿಸುವ ಕೆಲಸ ಮಾಡಿದ್ದು ಅನ್ಯಾಯ. ಈಗ ಗೋಡೆಗಳೆಲ್ಲ ಕಾಸು ಕಾಸು ಎನ್ನತೊಡಗಿವೆ ಎಂದು ವ್ಯಂಗ್ಯವಾಡಿದರು.
ಕಮಲ ಹುಟ್ಟುವುದು ಕೆಸರಲ್ಲಿ. ಹಾಗಾಗಿ ಬಿಜೆಪಿಗೆ ಕೆಸರು ಅಂದರೆ ಇಷ್ಟ. ಕೆಸರಲ್ಲೇ ಅವರು ಬದುಕುತ್ತಿದ್ದಾರೆ ಎಂದ ಅವರು, ಕೇಸರಿ ಬಣ್ಣ ಶಾಂತಿಯ ಪ್ರತೀಕ. ಆದರೆ ಅದನ್ನು ಸಂಘಟನೆಗೆ ತಂದುಕೊಂಡು ಬಿಜೆಪಿಯವರೆಲ್ಲ ಆ ಬಣ್ಣದ ಟೋಪಿ ಧರಿಸಲಾರಂಭಿಸಿದ್ದಾರೆ. ಪಕ್ಷಕ್ಕೂ, ಬಣ್ಣಕ್ಕೂ ಅದೇನು ಸಂಬಂಧವೋ ಎಂದು ಹೇಳಿದರು.

ಹೋರಾಟದ ಮೂಲಕ ನ್ಯಾಯ:
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಭ್ರಷ್ಟಾಚಾರದಿಂದ ರಾಜ್ಯ ಮುಳುಗಿ ಹೋಗಿದ್ದು, ಅಭಿವೃದ್ಧಿ ನಿಂತುಹೋಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ಅಪಾಯದ ಸ್ಥಿತಿ ಎಂದು ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ಶಿವಮೊಗ್ಗ ಜಿಲ್ಲೆ ಹೋರಾಟದ ನೆಲ. ಹೋರಾಟದ ಮೂಲಕವೇ ಜಿಲ್ಲೆಗೆ ಹಲವು ಶಾಸನ, ಸೌಲಭ್ಯಗಳನ್ನು ಪಡೆಯಲಾಗಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹೋರಾಟದ ಮೂಲಕವೇ ಮತ್ತೆ ಅಧಿಕಾರಕ್ಕೆ ಬರೋಣ. ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಶಿವಮೊಗ್ಗ ಈಗ ಭ್ರಷ್ಟರ ಕೂಪ:
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, ಶಿವಮೊಗ್ಗ ಸ್ಥಿತಿ ಯಾವ ರೀತಿಯಲ್ಲಿ ಇದೆಯೆಂದು ನಾನೂ ದೂರದಿಂದ ಶಿವಮೊಗ್ಗ ನೋಡುತ್ತಿರುತ್ತೇನೆ. ಬಿಜೆಪಿಯವರಿಗೆ ಯಾವತ್ತು ಜನಪರ, ರೈತರ ಪರ ಯೋಚನೆ ಮಾಡಲು ಸಮಯ ಇಲ್ಲ ಎಂದು ಹೇಳಿದರು.
೪೦% ಕಮಿಷನ್ ಪಡೆದ ಈಶ್ವರಪ್ಪ ಮನೆಯಲ್ಲಿ ನೋಟು ಎಣಿಸುವ ಯಂತ್ರ ಇದೆ. ಈಶ್ವರಪ್ಪ ಅಲ್ಪಸಂಖ್ಯಾತರಿಗೆ, ಗುತ್ತಿಗೆದಾರರಿಗೆ ಧಮಕಿ ಹಾಕುತ್ತಾರೆ. ಈಶ್ವರಪ್ಪ ಯಾವುದಾದರೂ ಒಳ್ಳೆಯ ಕೆಲಸ ಮಾಡಿದ್ದರೆ, ನಾನು ನಿಮ್ಮ ಮನೆಯಲ್ಲಿ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಶಾಸಕ ಬಿ. ಕೆ. ಸಂಗಮೇಶ್ ಮಾತನಾಡಿ, ಎಂಪಿಎಂ ಕಾರ್ಖಾನೆಯನ್ನು ಹಾಳು ಮಾಡಿ ೪೦೦ ಕೋಟಿ ರೂ. ಲೂಟಿ ಮಾಡಿದ ಕೀರ್ತಿ ಬಿಜೆಪಿಗೆ ಸೇರುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಎಂಪಿಎಂ ಅಭಿವೃದ್ಧಿಗಾಗಿ ಹಣ ಕೊಟ್ಟರು. ಅಭಿವೃದ್ಧಿಗೆ ಇನ್ನೂ ಹಣ ಬೇಕಿದೆ. ಆದರೆ ಈಗಿನ ಸರಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು.

ವೇದಿಕೆಯಲ್ಲಿ ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕೆಪಿಸಿಸಿ ಕಾರ್‍ಯಾಧ್ಯಕ್ಷ ಧ್ರುವನಾರಾಯಣ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್, ಬೇಳೂರು ಗೋಪಾಲಕೃಷ್ಣ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್, ಆರ್. ಪ್ರಸನ್ನಕುಮಾರ್, ಆರ್ ಎಂ ಮಂಜುನಾಥ ಗೌಡ ಎನ್.ರಮೇಶ್, ಎಸ್.ರವಿಕುಮಾರ್, ಎಸ್ಪಿ ದಿನೇಶ್ ಹಾಗೂ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಸೇರಿದಂತೆ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯಲ್ಲಿ ಬಂಗಾರಪ್ಪ ಮತ್ತು ಕಾಗೋಡು ತಿಮ್ಮಪ್ಪ ಅವರ ಕೊಡುಗೆ ಸಾಕಷ್ಟಿದೆ. ಆದರೆ ಬಿಜೆಪಿಯವರು ಅಭಿವೃದ್ದಿ ಎನ್ನುತ್ತಾ ಆಸ್ತಿಯನ್ನು ಮಾಡಿಕೊಂಡರು. ಯಡಿಯೂರಪ್ಪ, ಈಶ್ವರಪ್ಪ ಮತ್ತು ಶಂಕರಮೂರ್ತಿ ಪೈಪೋಟಿಗೆ ಬಿದ್ದವರಂತೆ ಆಸ್ತಿ ಮಾಡಿಕೊಂಡರು. ಈಗ ಜಿಲ್ಲೆಗೆ ಕಪ್ಪು ಚುಕ್ಕೆ ಅಂಟಿಸಿದರು. ಇಷ್ಟಾದರೂ ಈಶ್ವರಪ್ಪ ಅವರಿಗೆ ಯಡಿಯೂರಪ್ಪ ಅವರ ಬೆಂಬಲವಿದೆ. ನಗರದಲ್ಲಿ ಯುವಕನೊಬ್ಬನ ಕೊಲೆ ಆಗಿದೆ. ಆ ಸಂಬಂಧ ೧೩ ಜನರನ್ನು ಬಂಧಿಸಲಾಗಿದೆ. ತಪ್ಪು ಯಾರೇ ಮಾಡಿದ್ದರೂ ತಪ್ಪೇ. ಅವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಆದರೆ ಈ ವಿಚಾರದಲ್ಲಿ ರಾಜಕೀಯ ಮಾಡಬಾರದು.

ಡಿ ಕೆ. ಶಿವಕುಮಾರ್.

ಪಕ್ಷವು ಈಗ ನಡೆಸುತ್ತಿರುವ ಹೋರಾಟ ನಿಲ್ಲಬಾರದು. ಹೀಗೆಯೇ ಮುಂದುವರೆಯಬೇಕು. ಜನರ ಪರ ನಾಯಕರು ನಿಲ್ಲುತ್ತಾರೆ. ಬಗರ್‌ಹುಕುಂ ಬಗ್ಗೆ ಜಿಲ್ಲೆಯಲ್ಲಿ ಹೋರಾಟ ನಡೆಯುತ್ತಿದೆ. ಇದಕ್ಕೊಂದು ಅಂತ್ಯ ಹಾಡಬೇಕಿದೆ. ಮತ್ತೆ ಹೋರಾಟ ಮುಂದುವರೆಸುವ ಅಗತ್ಯವಿದೆ

ಮಧು ಬಂಗಾರಪ್ಪ


Ad Widget

Related posts

ಕೆಲಸಗಳು ಉತ್ತಮ ಗುಣಮಟ್ಟದಾಗಿರಲಿ : ಬಿ. ವೈ ರಾಘವೇಂದ್ರ

Malenadu Mirror Desk

ಕಾಡಾ ಆವರಣದಲ್ಲಿ ವಿಶ್ವ ಪರಿಸರ ದಿನ

Malenadu Mirror Desk

ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು: ಸರ್ಕಾರದ ಕ್ರಮವನ್ನ ಪ್ರಶ್ನಿಸಿದ ಡಾ.ಸರ್ಜಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.