ಶಿವಮೊಗ್ಗ ನಗರದಲ್ಲಿ 24*7 ಕುಡಿಯುವ ನೀರಿನ ಶುಲ್ಕ ಅವೈಜ್ಞಾನಿಕವಾಗಿದ್ದು, ಇದನ್ನು ಸರಿಪಡಿಸಲು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಾಗರಿಕರ ಸಭೆ ಕರೆಯಬೇಕೆಂದು ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಶಾಸಕ ಕೆ.ಎಸ್. ಈಶ್ವರಪ್ಪ ಅವರ ಕಚೇರಿ ಎದುರು ಧರಣಿ ನಡೆಸಲಾಯಿತು. ಸಭೆ ಕರೆಯುವಮತೆ ಶಾಸಕರಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದು, ಆದಾಗ್ಯೂ ಶಾಸಕರು ಮನವಿ ಪರಿಗಣಿಸದೇ ಇರುವುದರಿಂದ ಕಚೇರಿ ಮುಂಭಾಗದಲ್ಲಿ ಶಾಂತಿಯುತ ಹಾಗೂ ಕಾನೂನಾತ್ಮಕ ಪ್ರತಿಭಟನೆ ಕೈಗೊಂಡಿರುವುದಾಗಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತಕುಮಾರ್ ತಿಳಿಸಿದರು. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 61 ಸಾವಿರ ನೀರಿನ ತೆರಿಗೆದಾರರಿದ್ದಾರೆ. 24*7 ನೀರಿನ ಸಂಪರ್ಕವನ್ನು ಕೆಲವು ವಾರ್ಡ್ ಗಳಲ್ಲಿ ಮಾತ್ರ ಕಲ್ಪಿಸಲಾಗಿದೆ. ಈಗಿರುವ ೧೨ ಸಾವಿರ24*7 ಸಂಪರ್ಕದಲ್ಲಿ ೬ ಸಾವಿರ ಸಂಪರ್ಕದವರಿಗೆ ಮಾತ್ರ ನೀರಿನ ತೆರಿಗೆ ವಿಧಿಸಲಾಗುತ್ತಿದೆ. ಈ ನೀರಿನ ಶುಲ್ಕ ಅತ್ಯಂತ ದುಬಾರಿಯಾಗಿದೆ ಎಂದರು.
ಮೈಸೂರಿನಲ್ಲಿ 25 ಸಾವಿರ ಲೀಟರ್ 150 ರೂ. ಶುಲ್ಕ ಇದ್ದರೆ ಶಿವಮೊಗ್ಗದಲ್ಲಿ 275ರೂ. ಶುಲ್ಕ ವಿಧಿಸಲಾಗುತ್ತಿದೆ. ಮೈಸೂರಿನಲ್ಲಿ 50 ಸಾವಿರ ಲೀಟರ್ ಗೆ 275ರೂ. ಶುಲ್ಕ ವಿಧಿಸಿದರೆ ಶಿವಮೊಗ್ಗದಲ್ಲಿ 400 ರೂ. ಶುಲ್ಕ ವಿಧಿಸಲಾಗುತ್ತಿದೆ. ಈಗಾಗಲೇ ವಿಧಿಸಲಾಗಿರುವ ನೀರಿನ ಶುಲ್ಕ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ಸಮಾನ ಮಾನದಂಡ ವಿಧಿಸಿ ನೀರಿನ ಶುಲ್ಕ ನಿಗದಿ ಮಾಡಬೇಕು ಎಂದು ಒತ್ತಾಯಿಸದ ಅವರು, ಶಾಸಕರು ಸಂಬಂಧಿಸಿದ ಅಧಿಕಾರಿಗಳು ಹಾಗೂ ನಾಗರಿಕರ ಸಭೆಯನ್ನು ಕೂಡಲೇ ಕರೆಯದಿದ್ದಲ್ಲಿ ಪ್ರತಿವಾರ ಶಾಸಕರ ಕಚೇರಿ ಎದುರು ಧರಣಿ ನಡೆಸಲಾಗುವುದು. ಈ ಹೋರಾಟ ನಿರಂತರವಾಗಿದ್ದು, ಒಂದು ವೇಳೆ ನಮ್ಮ ಹೋರಾಟಕ್ಕೆ ಸಂದಿಸದೇ ಸಭೆ ಕರೆಯದಿದ್ದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಶಾಸಕರ ಕಚೇರಿ ಎದುರು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ಒಕ್ಕೂಟದ ಪ್ರಮುಖರಾದ ಡಾ. ಎ. ಸತೀಶ್ ಕುಮಾರ್ ಶೆಟ್ಟಿ, ಎಸ್.ಬಿ. ಅಶೋಕ್ ಕುಮಾರ್, ಜನಾರ್ಧನ ಪೈ, ಜನಮೇಜಿರಾವ್, ನಾಗರಾಜ್, ರಘುಪತಿ, ಚಂದ್ರಶೇಖರ್ ಗೌಡ ಮೊದಲಾದವರಿದ್ದರು.