ಶಿವಮೊಗ್ಗ,: ಇತ್ತೀಚೆಗೆ ಅತಿವೃಷ್ಟಿಯಿಂದಾಗಿ ಉಂಟಾಗಿರುವ ಅನಾಹುತಗಳು ಮುಂಬರುವ ಮಳೆಗಾಲದಲ್ಲಿ ಮರುಕಳಿಸದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತಕ್ಷಣದಿಂದಲೇ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರ ಅತಿವೃಷ್ಟಿ ಹಾನಿ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಶಿವಮೊಗ್ಗ ನಗರದಲ್ಲಿ ಕಾಲುವೆಗಳು, ಚರಂಡಿಗಳಲ್ಲಿ ತುಂಬಿರುವ ಹೂಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಇದೇ ರೀತಿ ನೀರು ಸರಾಗವಾಗಿ ಹರಿದುಹೋಗಲು ಅಡ್ಡಿಯಾಗುವ ಅಡೆತಡೆಗಳನ್ನು ನಿವಾರಿಸಬೇಕು. ಇತ್ತೀಚಿನ ಅತಿವೃಷ್ಟಿಯಿಂದ ಮತ್ತೆ ಚರಂಡಿಗಳಲ್ಲಿ ಕಸ ಕಡ್ಡಿಗಳು ತುಂಬಿರುವ ಸಾಧ್ಯತೆಯಿದ್ದು, ಆದ? ಬೇಗನೇ ತೆರವುಗೊಳಿಸಬೇಕು. ಶಿವಮೊಗ್ಗ ನಗರದಲ್ಲಿ ನೆರೆ ಪರಿಸ್ಥಿತಿಯನ್ನು ಎದುರಿಸಲು ವಾರ್ಡ್ವಾರು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಕಾಲುವೆ ಪ್ರದೇಶ ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು ಅವರು ತಿಳಿಸಿದರು.
ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ ಹಾಗೂ ಕಟಾವು ನಂತರ ಹಾನಿಗೀಡಾಗಿರುವ ಬೆಳೆಗಳಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಇತ್ತೀಚಿಗೆ ಹಾನಿಗೀಡಾಗಿರುವ ಎಲ್ಲಾ ಕೆರೆಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಇದೇ ರೀತಿ ಎಲ್ಲಾ ಕೆರೆಗಳನ್ನು ಪರಿಶೀಲಿಸಿ, ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ನಗರದಲ್ಲಿ ಹಾದು ಹೋಗಿರುವ ತುಂಗಾ ಚಾನೆಲ್‌ನಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ನಗರದಲ್ಲಿ ಸುಮಾರು ೪ಸಾವಿರ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ಒದಗಿಸಲು ಚಾಲನೆ ನೀಡಲಾಗಿದೆ. ಬೆಳೆ ಹಾನಿ ಕುರಿತು ಈಗಾಗಲೇ ಸರ್ವೇ ಕಾರ್ಯ ನಡೆಸಲಾಗಿದ್ದು, ಪರಿಹಾರವನ್ನು ಆದಷ್ಟು ಬೇಗನೇ ವಿತರಿಸಲಾಗುವುದು. ಮಾನವ ಪ್ರಾಣ ಹಾನಿ ಹಾಗೂ ಜಾನುವಾರು ಪ್ರಾಣ ಹಾನಿ ಪ್ರಕರಣಗಳಲ್ಲಿ ಪರಿಹಾರವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು
ಮಳೆಯಿಂದ ತೊಂದರೆಗೊಳಗಾಗಬಹುದಾದ92ಗ್ರಾಮ ಪಂಚಾಯತ್‌ಗಳನ್ನು ಗುರುತಿಸಲಾಗಿದ್ದು, ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳನ್ನು ಪರಿಶೀಲಿಸಲು ಹಾಗೂ ಮೆಶ್ ಅಳವಡಿಸಿ ಮೀನುಗಾರಿಕೆ ನಡೆಸುವ ಮೂಲಕ ಕೆರೆಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯರ್ನಿಹಣಾಧಿಕಾರಿ ವೈಶಾಲಿ ಅವರು ತಿಳಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರು, ನಗರದಲ್ಲಿ ನೆರೆ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಲಾಗಿರುವ ಕ್ರಿಯಾ ಯೋಜನೆಗಳ ಮಾಹಿತಿಯನ್ನು ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ಸೇರಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳೆ ಹಾನಿ ಕುರಿತು ಈಗಾಗಲೇ ಸರ್ವೇ ಕಾರ್ಯ ನಡೆಸಲಾಗಿದ್ದು, ಪರಿಹಾರವನ್ನು ಆದಷ್ಟು ಬೇಗನೇ ವಿತರಿಸಲಾಗುವುದು. ಮಾನವ ಪ್ರಾಣ ಹಾನಿ ಹಾಗೂ ಜಾನುವಾರು ಪ್ರಾಣ ಹಾನಿ ಪ್ರಕರಣಗಳಲ್ಲಿ ಪರಿಹಾರವನ್ನು ವಿತರಿಸಲಾಗಿದೆ
ಡಾ.ಸೆಲ್ವಮಣಿ, ಜಿಲ್ಲಾಧಿಕಾರಿ