ಕುವೆಂಪು ನಾಡಗೀತೆ ತಿರುಚಿ ಅವಮಾನ ಮಾಡಿದವರನ್ನು ಸಮಿತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ಜೂ. 3 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕನ್ನಡದ ಶಿಖರ ಪ್ರಜ್ಞೆಯಾಗಿರುವ ಕುವೆಂಪು ಅವರಿಗೆ ರೋಹಿತ್ ಚಕ್ರತೀರ್ಥ ಅಗೌರವ ತೋರಿಸಿದ್ದಾರೆ. ನಾಡಗೀತೆ ತಿರುಚುವ ಮೂಲಕ ಕುವೆಂಪು ಅವರಿಗೆ, ಕನ್ನಡನಾಡಿಗೆ ಅಗೌರವ ತೋರಿದ್ದಾರೆ. ಅವರನ್ನು ಸಮಿತಿಯಿಂದ ಕೂಡಲೇ ಕೈಬಿಡಬೇಕು. ಅಲ್ಲದೇ, ಅವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಪಠ್ಯಗಳು ಸಿದ್ಧಾಂತಗಳ ಅಸ್ತ್ರವಲ್ಲ, ಯಾವುದೇ ಪಠ್ಯಗಳು ಪ್ರಕ್ಷುಬ್ಧ ಸ್ಥಿತಿಯನ್ನು ನಿರ್ಮಾಣ ಮಾಡಬಾರದು. ಇಷ್ಟು ವರ್ಷಗಳಲ್ಲಿ ಯಾವ ಪಠ್ಯ ಪುಸ್ತಕ ರಚನಾ ಸಮಿತಿಯೂ ಸಾಂಸ್ಕೃತಿಕ ಪರಿಸ್ಥಿತಿಯ ಮೇಲೆ ದಬ್ಬಾಳಿಕೆ ನಡೆಸಿರಲಿಲ್ಲ. ಆದರೆ, ಈಗ ಬಿಜೆಪಿ ಸರ್ಕಾರ ಹೊಸ ಶಿಕ್ಷಣ ನೀತಿಯ ನೆಪವೊಡ್ಡಿ ಪಠ್ಯಗಳನ್ನು ತಿದ್ದಿ ಮಕ್ಕಳನ್ನು ಭಾವನಾತ್ಮಕ ಸ್ಥಿತಿಗೆ ದೂಡಿ ತಪ್ಪು ಗ್ರಹಿಕೆಯನ್ನು ನಿರ್ಮಿಸಿ ಯಾವುದೋ ಒಂದು ಸಿದ್ಧಾಂತವನ್ನು ಹೇರಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಠ್ಯ ಪುಸ್ತಕಗಳು ಶಾಂತಿ ಕಾಪಾಡಬೇಕು. ಈ ನಾಡಿನ ಇತಿಹಾಸ, ಧರ್ಮ, ಸಾಂಸ್ಕೃತಿಕ ತಿಳಿವಳಿಕೆಗಳನ್ನು ತಿಳಿಸುವ ಮೂಲಕ ಮಕ್ಕಳನ್ನು ವಿಕಾಸಕ್ಕೆ ತೆಗೆದುಕೊಂಡು ಹೋಗಬೇಕು. ಆದರೆ, ಇಂದಿನ ಹೊಸ ಪಠ್ಯ ಪರಿಷ್ಕರಣಾ ಸಮಿತಿ ಜಾತಿಗಳು, ಧರ್ಮಗಳ ನಡುವೆ ಗೋಡೆ ಕಟ್ಟುವ ಕೆಲಸ ಮಾಡುತ್ತಿದೆ. ಅನೇಕ ಮಹನೀಯರ ಕವಿಗಳ ಪಠ್ಯವನ್ನು ಕೈಬಿಡುವುದರ ಜೊತೆಗೆ ಬೇಡವಾದುದನ್ನು ಸೇರಿಸಲು ಹೊರಟಿದೆ. ಶಿಕ್ಷಣ ಸಚಿವರು ಇದಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಇಡೀ ರಾಜ್ಯಾದ್ಯಂತ ಪ್ರತಿರೋಧಗಳು ನಡೆಯುತ್ತಿದ್ದರೂ ತಮಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಮೌನಕ್ಕೆ ಶರಣಾಗಿದ್ದಾರೆ. ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದರು.
ಯಾವುದೇ ಕಾರಣಕ್ಕೂ ಹೊಸ ಪಠ್ಯವನ್ನು ನಾವು ಒಪ್ಪುವುದಿಲ್ಲ. ಪರಿಷ್ಕರಣೆ ಪಾರದರ್ಶಕವಾಗಿಲ್ಲ. ಲಂಕೇಶ್ ಅವರ ಲೇಖನ ತೆಗೆದು ಚಕ್ರವರ್ತಿ ಸೂಲಿಬೆಲೆ ಅವರ ಲೇಖನ ಹಾಕಲಾಗಿದೆ. ಇದೊಂದು ಸಾಂಸ್ಕೃತಿಕ ದಬ್ಬಾಳಿಕೆ ಆಗಿದೆ. ಕನ್ನಡದ ಜನರು ಸುಮ್ಮನಿರುವುದಿಲ್ಲ. ನಾಳೆಯಿಂದಲೇ ಹೋರಾಟ ತೀವ್ರಗೊಳ್ಳುತ್ತದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಜಿಲ್ಲಾ ಕಸಾಪ ಈ ಪರಿಷ್ಕರಣೆ ಎಂಬ ದಬ್ಬಾಳಿಕೆಯನ್ನು ಸಹಿಸುವುದಿಲ್ಲ. ಇದನ್ನು ಶಿವಮೊಗ್ಗದ ಎಲ್ಲಾ ಸಂಘಟನೆಗಳು ಪ್ರಗತಿಪರರು ಖಂಡಿಸಿದ್ದಾರೆ. ಜೂ. 3 ರಂದು ಬೆಳಗ್ಗೆ 10 ಗಂಟೆಗೆ ಶಿವಪ್ಪನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಲಿದೆ. ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಲಾಗುವುದು. ರೋಹಿತ್ ಚಕ್ರವರ್ತಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಗುವುದು ಎಂದರು.
ರೈತ ಮುಖಂಡ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, 9 ನೇ ತರಗತಿಯ ಸಮಾಜ ಶಾಸ್ತ್ರದಲ್ಲಿ ಬಸವೇಶ್ವರರ ಬಗ್ಗೆ ತಿರುಚಿ ಬರೆಯಲಾಗಿದೆ. ಬಸವಣ್ಣನವರು ಉಪನಯನ ಮಾಡಿಸಿಕೊಂಡರು. ಅವರಿಗೆ ಶೈವ ಗುರುಗಳು ದೀಕ್ಷೆ ಕೊಟ್ಟರು ಎಂದು ಹೇಳಲಾಗಿದೆ. ಇದರ ವಿರುದ್ಧ ಈಗಾಗಲೇ ಲಿಂಗಾಯಿತ ಮಠಗಳು ತಿರುಗಿ ಬಿದ್ದಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಟಿ. ಗಂಗಾಧರ್, ಎಂ. ಗುರುಮೂರ್ತಿ, ಕೆ.ಪಿ ಶ್ರೀಪಾಲ್, ರಮೇಶ್ ಹೆಗ್ಡೆ, ಹೆಚ್.ಸಿ. ಯೋಗೀಶ್, ಕೆ.ಎಲ್. ಅಶೋಕ್, ಬಿ.ಚಂದ್ರೇಗೌಡ, ಶಾಂತಾ ಸುರೇಂದ್ರ, ಕೃಷ್ಣಮೂರ್ತಿ, ಅಂಬಿಕಾ, ರತ್ನಯ್ಯ, ಜೆ.ಎಲ್. ಪದ್ಮನಾಭ್, ಅನನ್ಯ ಶಿವಕುಮಾರ್, ಶ್ರೀಕಾಂತ್ ಮೊದಲಾದವರಿದ್ದರು.
ಪಠ್ಯಗಳು ಸಿದ್ಧಾಂತಗಳ ಅಸ್ತ್ರವಲ್ಲ, ಯಾವುದೇ ಪಠ್ಯಗಳು ಪ್ರಕ್ಷುಬ್ಧ ಸ್ಥಿತಿಯನ್ನು ನಿರ್ಮಾಣ ಮಾಡಬಾರದು. ಇಷ್ಟು ವರ್ಷಗಳಲ್ಲಿ ಯಾವ ಪಠ್ಯ ಪುಸ್ತಕ ರಚನಾ ಸಮಿತಿಯೂ ಸಾಂಸ್ಕೃತಿಕ ಪರಿಸ್ಥಿತಿಯ ಮೇಲೆ ದಬ್ಬಾಳಿಕೆ ನಡೆಸಿರಲಿಲ್ಲ. ಆದರೆ, ಈಗ ಬಿಜೆಪಿ ಸರ್ಕಾರ ಹೊಸ ಶಿಕ್ಷಣ ನೀತಿಯ ನೆಪವೊಡ್ಡಿ ಪಠ್ಯಗಳನ್ನು ತಿದ್ದಿ ಮಕ್ಕಳನ್ನು ಭಾವನಾತ್ಮಕ ಸ್ಥಿತಿಗೆ ದೂಡಿ ತಪ್ಪು ಗ್ರಹಿಕೆಯನ್ನು ನಿರ್ಮಿಸಿ ಯಾವುದೋ ಒಂದು ಸಿದ್ಧಾಂತವನ್ನು ಹೇರಲು ಹೊರಟಿದೆ
– ಪ್ರೊ.ರಾಜೇಂದ್ರ ಚೆನ್ನಿ ,ಚಿಂತಕ