ಪ್ರಧಾನಿ ಮೋದಿ ಅವರ ೮ ವರ್ಷದ ಸಮರ್ಥ ಅಭಿವೃದ್ಧಿಯ ಆಡಳಿತದ ಫಲವಾಗಿ 2024ರಲ್ಲಿ ಮತ್ತೊಮ್ಮೆ ಬಿಜೆಪಿ ರಾಷ್ಟ್ರಾದ್ಯಂತ ವಿಜೃಂಭಿಸಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ಮತ್ತು ಸಂವಾದದಲ್ಲಿ ಮಾತನಾಡಿದ ಅವರು, ಪ್ರಧಾನಿ ಅವರು ಕಳೆದ ೮ ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ ಜಾರಿಗಳಿಸಿದ್ದಾರೆ. ರೈತರಿಗೆ, ಬಡವರಿಗೆ, ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನು ರೂಪಿಸಿದ್ದಾರೆ. ಕೋಟ್ಯಂತರ ಜನ ಇದರ ಪ್ರಯೋಜನ ಪಡೆದಿದ್ದಾರೆ. ಅವರ 8 ವರ್ಷದ ಸಾಧನೆ ಅಷ್ಟದಿಕ್ಕುಗಳಲ್ಲಿಯೂ ಪಸರಿಸಿದೆ. ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದೆ. ಅವರೇ ಹೇಳುವಂತೆ ನಾನೊಬ್ಬ ಸೇವಕ ಎಂದು ದೇಶದ ಸಮಗ್ರ ಅಭಿವೃದ್ಧಿಯ ಜೊತೆಗೆ ರಕ್ಷಣೆ, ಆಂತರಿಕ ಭದ್ರತೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದರು.
ಪ್ರಧಾನಿ ಮೋದಿ ಅವರು ಕೊರೋನಾ ಸಮಯದಲ್ಲಿ ಅನೇಕ ಬಡರಾಷ್ಟ್ರಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡಿದ್ದಾರೆ. ಅವರ ವಿದೇಶಾಂಗ ನೀತಿ ಜಗತ್ತಿನ ಗಮನಸೆಳೆದಿದೆ. 110 ಕ್ಕೂ ಹೆಚ್ಚು ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ.60 ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾರೆ. ಅಮೆರಿಕದ ಸಂಸತ್ ಭವನ ಕೂಡ ಅವರನ್ನು ಅಭಿನಂದಿಸಿದೆ. ಆಂತರಿಕ ಭದ್ರತೆಯ ವಿಷಯದಲ್ಲಿ ಇಡೀ ವಿಶ್ವವೇ ಅಚ್ಚರಿಪಡುವಷ್ಟು ಕ್ರಮ ತೆಗೆದುಕೊಂಡಿದ್ದಾರೆ. ಕಾಶ್ಮೀರ ವಿಷಯ, ಅರುಣಾಚಲ ಪ್ರದೇಶದಲ್ಲಿ ರಕ್ಷಣೆ, ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ, ಪಾಕಿಸ್ತಾನವನ್ನು ಒಂಟಿಯಾಗಿ ಮಾಡಿದ್ದು ಇತಿಹಾಸ ಎಂದರು.
370 ನೇ ವಿಧಿಯನ್ನು ತೆಗೆದುಹಾಕಿದ್ದು ರಾಮಮಂದಿರ ಸೇರಿದಂತೆ ಇಡೀ ರಾಷ್ಟ್ರಾದ್ಯಂತ ಹಿಂದೂ ದೇವಾಲಯಗಳ ಪುನರುಜ್ಜೀವನಗೊಳಿಸಿದ್ದು, ಯೋಗಕ್ಕೆ ಒತ್ತುಕೊಟ್ಟಿದ್ದು ಉಕ್ರೇನ್ ಯುದ್ಧದಲ್ಲಿ 23 ಸಾವಿರ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿ ಭಾರತಕ್ಕೆ ವಾಪಸ್ ಕರೆಸಿಕೊಂಡಿದ್ದು ಮೋದಿ ಅವರ ಸಾಧನೆ ಎಂದು ಕೊಂಡಾಡಿದರು.
ರಾಜ್ಯ ಸರ್ಕಾರ ಕೂಡ ಅಭಿವೃದ್ಧಿಯ ಪಥದತ್ತ ಸಾಗಿದೆ. ಡಬಲ್ ಎಂಜಿನ್ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಸಾಗುತ್ತಿವೆ. ಕೇಂದ್ರದಿಂದ ಸಾಕಷ್ಟು ಹಣ ಕೂಡ ಬಂದಿದೆ. ಸ್ಮಾರ್ಟ್ ಸಿಟಿ ಕೆಲಸಗಳು ಮುಗಿದ ಮೇಲೆ ಅದರ ಮಹತ್ವ ಗೊತ್ತಾಗುತ್ತದೆ. ಸಣ್ಣ ಪುಟ್ಟ ತಪ್ಪುಗಳು ಇರಬಹುದು. ಅವುಗಳನ್ನು ಸರಿಪಡಿಸಲಾಗುವುದು ಎಂದರು.
ಒಟ್ಟಾರೆ, ಮೋದಿ ಅವರ 8 ವರ್ಷದ ಸಾಧನೆಯನ್ನು ಪ್ರತಿ ಬೂತ್ ಮಟ್ಟದಿಂದ ತಿಳಿಸಲಾಗುವುದು. ನಮ್ಮ ಕಾರ್ಯಕರ್ತರು ಮೋದಿ ಅವರ ಎಲ್ಲಾ ಯೋಜನೆಗಳ ಬಗ್ಗೆ ಅರಿವು ಮೂಡಿಸುವರು. ಈ ಎಲ್ಲಾ ಸಾಧನೆಗಳಿಂದ 2024 ರಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಮತ್ತೆ ವಿಜೃಂಭಿಸುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ವಿಭಾಗೀಯ ಪ್ರಭಾರಿ ಗಿರೀಶ್ ಪಟೇಲ್ ಇದ್ದರು.
ಶಿಕ್ಷಣ, ಆರೋಗ್ಯ, ಭದ್ರತೆ, ಕೈಗಾರಿಕಾ ಅಭಿವೃದ್ಧಿ ಹೀಗೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯಾಗಿದೆ. ಪ್ರಧಾನ ಮಂತ್ರಿಗಳ ಅನೇಕ ಜನಪ್ರಿಯ ಯೋಜನೆಗಳಿಂದ ಕೋಟಿ ಕೋಟಿ ಜನರು ಪ್ರಯೋಜನ ಪಡೆದಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡಿದ್ದಾರೆ. ೮ ಲಕ್ಷ ಹಳ್ಳಿಗಳನ್ನು ಬಹಿರ್ದೆಸೆ ಮುಕ್ತ ಮಾಡಿದ್ದಾರೆ. ಎರಡೂವರೆ ಕೋಟಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ೯.೫ ಕೋಟಿ ಬಡವರ ಮನೆಗಳಿಗೆ ನೀರು ನೀಡಿದ್ದಾರೆ. ೪೫ ಕೋಟಿಗೂ ಹೆಚ್ಚು ಜನರು ವಿವಿಧ ಯೋಜನೆಗಳ ಪ್ರಯೋಜನ ಪಡೆದಿದ್ದಾರೆ
–ಬಿ.ವೈ. ರಾಘವೇಂದ್ರ ಸಂಸದ
ಪ್ರಧಾನಿ ಹೈಲೈಟ್ಸ್
ಜಗತ್ತಿಗೆ ಭಾರತದ ಕೀರ್ತಿ
ನವಭಾರತದ ಪ್ರಧಾನ ಸೇವಕ
ಆಂತರಿಕ, ಬಾಹ್ಯ ಭದ್ರತೆ
.ಕಾಶಿಯಲ್ಲಿ ಸುಸಜ್ಜಿತ ಕಾರಿಡಾರ್ ನಿರ್ಮಾಣ
ಪುಣ್ಯಸ್ಥಳಗಳಲ್ಲಿ ಪ್ರಸಾದ ಯೋಜನೆ
.ಬಡವರ ಕಲ್ಯಾಣ ಕಾರ್ಯಕ್ರಮ
.ಆತ್ಮನಿರ್ಭರ್
ಸ್ವಚ್ಛಭಾರತ
.ಕಿಸಾನ್ ಕಲ್ಯಾಣ್
ಗರೀಬಿ ಕಲ್ಯಾಣ್
80 ಕೋಟಿ ಜನರಿಗೆ ಉಚಿತ ರೇಷನ್