ಬುದ್ಧ, ಬಸವ, ಅಂಬೇಡ್ಕರ್ ಅವರ ವಿಷಯಗಳನ್ನು ಪಠ್ಯದಲ್ಲಿ ಕೈಬಿಟ್ಟಿದ್ದನ್ನು ವಿರೋಧಿಸಿ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಲು ಆಗ್ರಹಿಸಿ, ಶಿಕ್ಷಣ ಸಚಿವರನ್ನು ಸಂಪುಟದಿಂದ ಕೈಬಿಡಲು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರನ್ನು ಬೇಕೆಂದೇ ಅವಮಾನ ಮಾಡಿದ್ದಾರೆ. ಗಾಂಧೀಜಿಯವರ ಬದುಕನ್ನೇ ತಿರುಚಿದ್ದಾರೆ. ಬಸವಣ್ಣ ಅವರ ಜೀವನ ಕ್ರಮವನ್ನು ಬದಲಾಯಿಸಿ ಬರೆದಿದ್ದಾರೆ ಎಂದು ಪ್ರತಿಭಟನಾನಿರತರು ಖಂಡಿಸಿದರು.
ರಾಜ್ಯದಾದ್ಯಂತ ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆಯುತ್ತಿದ್ದರೂ ಕೂಡ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಮೂಗಿಗೆ ತುಪ್ಪ ಸವರುವಂತಹ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ, ಶಿಕ್ಷಣ ಸಚಿವರು ಕೂಡ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಇಷ್ಟೊಂದು ವಿವಾದಗಳಿದ್ದರೂ ಅದನ್ನು ಸಮರ್ಥಿಸಿಕೊಳ್ಳುತ್ತಿರುವ ಸಚಿವ ನಾಗೇಶ್ ಅವರನ್ನು ತಕ್ಷಣದಿಂದಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಪಠ್ಯಪುಸ್ತಕಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾತಿಯತೆಯ ವಿಷಬೀಜವನ್ನು ಬಿತ್ತಲು ಹೊರಟಿದ್ದಾರೆ. ಶರಣರ ಬದುಕನ್ನೇ ವಿಕೃತಗೊಳಿಸುತ್ತಿದ್ದಾರೆ. ಅಕ್ಕಮಹಾದೇವಿ, ಪುರಂದರದಾಸರು, ಕನಕದಾಸರು, ನಾರಾಯಣಗುರು ಮುಂತಾದ ಮಹಾನ್ ವ್ಯಕ್ತಿಗಳ ಜೀವನ ಅವರಿಗೆ ಬೇಕಾಗಿಲ್ಲ. ಇತ್ತೀಚೆಗೆ ಹುಟ್ಟಿಕೊಂಡ ತೇಜಸ್ವಿ ಸೂರ್ಯ ಅಂತಹವರ ಆರೆಸ್‌ಎಸ್ ಅಜೆಂಡದ ವಿಷಯಗಳನ್ನು ಪಠ್ಯಗಳಲ್ಲಿ ತುರುಕಲು ಹೊರಟಿರುವುದು ರಾಷ್ಟ್ರದ್ರೋಹದ ವಿಷಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ಹೊಸ ಪಠ್ಯ ಪುಸ್ತಕಗಳು ಬಿಡುಗಡೆಯಾಗಬಾರದು. ಹಳೆಯ ಪುಸ್ತಕಗಳನ್ನೇ ಈ ವರ್ಷ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ ಅವರು ಅಕಸ್ಮಾತ್ ಹೊಸ ಪಠ್ಯಪುಸ್ತಕಗಳನ್ನು ಜಾರಿಗೆ ತಂದರೆ ಕಾಂಗ್ರೆಸ್ ತನ್ನ ಹೋರಾಟವನ್ನು ತೀವ್ರಗೊಳಿಸುತ್ತದೆ ಎಂದು ಎಚ್ಚರಿಸಿದರು. ರೋಹಿತ್ ಚಕ್ರತೀರ್ಥ ಅವರ ಪ್ರತಿಕೃತಿ ದಹಿಸಿ, ಆಕ್ರೋಶವನ್ನ ಕಾರ್ಯಕರ್ತರು ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್,ಪ್ರಮುಖರಾದ ಚಂದ್ರಭೂಪಾಲ್, ಎನ್. ರಮೇಶ್, ಎಲ್. ರಾಮೇಗೌಡ, ವೈ.ಹೆಚ್. ನಾಗರಾಜ್, ಲೋಕೇಶ್, ಜಿ.ಡಿ. ಮಂಜುನಾಥ್, ಕೆ. ರಂಗನಾಥ್, ಹೆಚ್.ಪಿ. ಗಿರೀಶ್, ಕುಮರೇಶ್, ಚೇತನ್, ಮಧುಸೂದನ್, ಮಹಮ್ಮದ್ ನಿಹಾಲ್, ವಿಜಯ, ರವಿ, ರೇಖಾ ರಂಗನಾಥ್, ಸುವರ್ಣ ನಾಗರಾಜ್, ನಾಜೀಮಾ, ಪ್ರೇಮಾ ಶೆಟ್ಟಿ, ಶೋಭಾ ರವಿಕುಮಾರ್, ಚಂದ್ರಕಲಾ, ಶಮಿನಾ ಬಾನು, ಕವಿತಾ ಸೇರಿದಂತೆ ಹಲವರಿದ್ದರು.
ಕನ್ನಡವೇ ಸರಿಯಾಗಿ ಬಾರದ ರೋಹಿತ್ ಚಕ್ರತೀರ್ಥರಂತಹವರನ್ನು ಪಠ್ಯಪರಿಷ್ಕರಣ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿರುವುದೇ ಒಂದು ದೊಡ್ಡ ಅಪರಾಧ. ಆತ ಈ ನಾಡಿನ ಸಾಹಿತಿಗಳನ್ನೆಲ್ಲಾ ಅವಮಾನ ಮಾಡಿದ್ದಾನೆ. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನೇ ಹೀಯಾಳಿಸಿ ಬರೆದಿದ್ದಾನೆ. ಈತನಿಗೆ ಯಾವ ಯೋಗ್ಯತೆಯೂ ಇಲ್ಲ. ದೇವನೂರು ಮಹದೇವ, ಬರಗೂರು ರಾಮಚಂದ್ರಪ್ಪ ಸೇರಿದಂತೆ ನಾಡಿನ ನೂರಾರು ಸಾಹಿತಿಗಳಿಗೆ ಅವಮಾನ ಮಾಡಿದ್ದಾನೆ. ಇಂತಹ ಅಯೋಗ್ಯನನ್ನು ತಕ್ಷಣವೇ ಬಂಧಿಸಬೇಕು.–ಹೆಚ್.ಎಸ್. ಸುಂದರೇಶ್‌ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ